July 28, 2026
Tuesday, July 28, 2026
spot_img

ಒಳನುಸುಳುಕೋರರ ಅಡ್ಡೆಯಾಯಿತೇ ಬಂಗಾಳ? ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತವು ರಾಜ್ಯವನ್ನು ಭಯದ ಕೂಪಕ್ಕೆ ದೂಡಿದೆ ಎಂದು ಟೀಕಿಸಿದರು. “ಬಂಗಾಳದ ತಾಯಿ ಇಂದು ಕಣ್ಣೀರಿಡುತ್ತಿದ್ದಾಳೆ. ಒಳನುಸುಳುಕೋರರ ಸಂಖ್ಯೆ ಹೆಚ್ಚಾಗಿದ್ದು, ಸಾಮಾನ್ಯ ಜನರು ಆತಂಕದಲ್ಲಿ ಬದುಕುವಂತಾಗಿದೆ” ಎಂದು ಅವರು ಕಿಡಿಕಾರಿದರು.

ಮಹಿಳಾ ಸಬಲೀಕರಣಕ್ಕೆ ಹೆಸರಾಗಿದ್ದ ಬಂಗಾಳವನ್ನು ಟಿಎಂಸಿ ಕೆಳಮಟ್ಟಕ್ಕೆ ಇಳಿಸಿದೆ ಎಂದು ಆರೋಪಿಸಿದ ಮೋದಿ, ರಾಜ್ಯದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳನ್ನು ಪಟ್ಟಿ ಮಾಡಿದರು:

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಯುವ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿದ ಮೋದಿ, ಇದು ರಾಜ್ಯದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದರು.

ಕಾಮದುನಿಯ ಸಾಮೂಹಿಕ ಅತ್ಯಾಚಾರ, ಪಾರ್ಕ್ ಸ್ಟ್ರೀಟ್ ಪ್ರಕರಣ, ಹನ್ಸ್‌ಖಾಲಿ ಮತ್ತು ದುರ್ಗಾಪುರ ವೈದ್ಯಕೀಯ ಕಾಲೇಜು ಅತ್ಯಾಚಾರ ಪ್ರಕರಣಗಳನ್ನು ಉಲ್ಲೇಖಿಸಿ, ಟಿಎಂಸಿ ಸರ್ಕಾರವು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ದೂರಿದರು.

ಮೊದಲ ಹಂತದ ಮತದಾನದಲ್ಲಿ ಕಂಡುಬಂದ ದಾಖಲೆ ಪ್ರಮಾಣದ ಮತದಾನವು ಟಿಎಂಸಿ ವಿರುದ್ಧದ ಆಕ್ರೋಶವನ್ನು ತೋರಿಸುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟರು. “ಬಂಗಾಳದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳು ಈಗ ಅನ್ಯಾಯದ ವಿರುದ್ಧ ದಂಗೆ ಎದ್ದಿದ್ದಾರೆ. ಈ ಬಾರಿ ಮಹಿಳೆಯರು ಮತಪೆಟ್ಟಿಗೆಯ ಮೂಲಕ ಬದಲಾವಣೆ ತರಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಅನ್ಯಾಯದ ಫೈಲ್‌ಗಳನ್ನು ಮರುಪರಿಶೀಲಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂಬ ಭರವಸೆಯನ್ನು ಮೋದಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !