ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ದಕ್ಷಿಣ ಭಾಗದ ಕುಮಾಮೊಟೊ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ 7.1 ತೀವ್ರತೆಯ ಪ್ರಬಲ ಭೂಕಂಪ ಭಾರೀ ಅನಾಹುತ ಸೃಷ್ಟಿಸಿರುವ ಬೆನ್ನಿಗೇ ಭೂಕಂಪದ ಕೆಲವೇ ಕ್ಷಣಗಳ ಬಳಿಕ ಕಾಶಿಮಾ ಪಟ್ಟಣದ ಏಯಾನ್ ಶಾಪಿಂಗ್ ಮಾಲ್‌ನಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿದೆ.
ಮಾಲ್‌ನಲ್ಲಿದ್ದ ಗ್ರಾಹಕರನ್ನು ತುರ್ತಾಗಿ ಹೊರಗೆ ಸ್ಥಳಾಂತರಿಸಲಾಗಿದ್ದರೂ, ಸ್ಫೋಟ ಸಂಭವಿಸಿದ ವೇಳೆ ಕೆಲ ಸಿಬ್ಬಂದಿ ಮತ್ತು ಇತರರು ಒಳಗೆ ಸಿಲುಕಿರುವ ಸಾಧ್ಯತೆಯಿದೆ. ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿಸಿವೆ. ಮಾಲ್‌ನಲ್ಲಿ ಸ್ಫೋಟ ಸಂಭವಿಸಿದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಭೂಕಂಪದಿಂದ ಅನಿಲ ಸೋರಿಕೆ ಉಂಟಾಗಿ ಸ್ಫೋಟ ಸಂಭವಿಸಿರಬಹುದೆಂಬ ಶಂಕೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಘಟನೆಯ ಬೆನ್ನಿಗೇ ಜಪಾನ್ ಪ್ರಧಾನಿ ತುರ್ತು ಸಭೆ ನಡೆಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳನ್ನು ವೇಗಗೊಳಿಸಲು ಸೂಚಿಸಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಸ್ಫೋಟದಿಂದ ಕಟ್ಟಡದ ಒಂದು ಭಾಗ ಕುಸಿದಿದ್ದು, ಹಲವರು ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ನಡುವೆ ಭೂಕಂಪದ ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದ್ದರೂ, ಬಳಿಕ ಅದನ್ನು ಹಿಂಪಡೆಯಲಾಗಿದೆ. ಭೂಕಂಪದಿಂದ ಮನೆಗಳು, ರಸ್ತೆಗಳು ಹಾಗೂ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ಮನೆ ಕುಸಿತದಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭೂಕಂಪದ ಪರಿಣಾಮ ಎಲ್ಲೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ರೈಲು ಹಾಗೂ ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಮೊಬೈಲ್ ಸಂಪರ್ಕ ಸೇವೆಯಲ್ಲೂ ವ್ಯತ್ಯಯ ವರದಿಯಾಗಿದೆ. ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಆತಂಕಕಾರಿ ಬೆಳವಣಿಗೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಸನಾಏ ತಕೈಚಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದು, ಭೂಕಂಪದ ನಂತರವೂ ಹಲವು ಆಫ್ಟರ್‌ಶಾಕ್‌ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.



