ಹೊಸದಿಗಂತ ವರದಿ,ಮಂಡ್ಯ :
ಐದು ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿ, ಇದೀಗ 62 ಕೋಟಿ ರೂ. ಕೇಳುತ್ತಿದ್ದಾರೆ. ಇದು ಲೂಟಿನಾ, ಭ್ರಷ್ಟಾಚಾರದ ಕೂಪನಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರಿಗೆ ಕೊಡಬೇಕಾದ ನಿವೇಶನದಲ್ಲಿ ಹರಿಶಿನ-ಕುಂಕುಮಕ್ಕಾಗಿ 14 ಸೈಟುಗಳನ್ನು ಪಡೆದಿರುವ ಮುಖ್ಯಮಂತ್ರಿಗಳಿಗೆ ದರಿದ್ರ್ಯಾ ಬಂದಿದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್‌ನವರು ನಮ್ಮ ಸರ್ಕಾರವನ್ನು ತೆಗೆಯಲು ನಿಂತಿದ್ದಾರೆ ಎನ್ನುತ್ತಾರೆ. ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕುವವರು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿತ್ತು ಎನ್ನುತ್ತಾರೆ. ವಿರೋಧ ಪಕ್ಷದಲ್ಲಿದ್ದಾಗ ಮಣ್ಣು ತಿನ್ನುತ್ತಿದ್ದರೆ, ಆಗ ಏಕೆ ಹಗರಣದ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಈ ಹೋರಾಟ ಸಿದ್ದರಾಮಯ್ಯ ಲೂಟಿ ಮಾಡಿರುವ ಬಗ್ಗೆ, ಆ ಸೈಟುಗಳು ವಾಪಸ್ಸು ಬರಬೇಕು. ಈ ಪಾದಯಾತ್ರೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅರೇ ದಾರಿ ಮಾಡಿಕೊಡುತ್ತಿದ್ದಾರೆ. ಕಾರಣ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿದರೆ ಲಾಭ ಅವರಿಗೇ ಎಂದು ಕುಟುಕಿದರು.