ಹಾಗಾದ್ರೆ, ರಷ್ಯ ಯುದ್ಧದಲ್ಲಿ ಸೋಲ್ತಿದೆಯಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ವಿರುದ್ಧ ರಷ್ಯ ಯುದ್ಧ ಘೋಷಿಸಿ 40 ದಿನಗಳಾದರೂ ರಾಜಧಾನಿ ವಶಪಡಿಸಿಕೊಳ್ಳುವುದಕ್ಕಾಗಿಲ್ಲ, ಸುಲಭದಲ್ಲಿ ಗೆಲ್ಲಬಹುದೆಂದುಕೊಂಡು ಪುಟಿನ್ ತಪ್ಪು ಲೆಕ್ಕಾಚಾರ ಹಾಕಿ ಪೇಚಿಗೆ ಬಿದ್ದಿದ್ದಾರೆ- ಇಂಥ ವ್ಯಾಖ್ಯಾನಗಳನ್ನು ಪಾಶ್ಚಾತ್ಯ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಕೇಳಿರುತ್ತೀರಿ, ಓದಿರುತ್ತೀರಿ.

ಹಾಗಾದ್ರೆ, ರಷ್ಯ ಸಮರಾಂಗಣದಲ್ಲಿ ನಿಜಕ್ಕೂ ಸೋತು ಸುಸ್ತಾಯ್ತಾ? ಉಕ್ರೇನ್ ಮೇಲೆ ದಂಡೆತ್ತಿ ಹೋಗಿದ್ದು ಪುಟಿನ್ ದಡ್ಡತನವಾಯ್ತಾ?

ಇಂಥ ಅನುಮಾನಗಳಿಗೆ ಭಿನ್ನ ನೆಲೆಯಲ್ಲಿ ವಿಶ್ಲೇಷಣೆ ನಡೆಸಿದ್ದಾರೆ ಅಂತಾರಾಷ್ಟ್ರೀಯ ಹಾಗೂ ಮಿಲಿಟರಿ ವಿದ್ಯಮಾನಗಳ ಪ್ರಖರ ವಿಶ್ಲೇಷಕ ಬ್ರಹ್ಮ ಚೆಲ್ಲಾನಿ.

ತಮ್ಮ ಇತ್ತೀಚಿನ ಟ್ವೀಟ್ ಸರಣಿಯಲ್ಲಿ ಅವರು ಹೇಳಿರುವುದೇನೆಂದರೆ- ಇದರ ಸೋಲು-ಗೆಲುವು ನಿರ್ಧಾರವಾಗುವುದು ಪುಟಿನ್ ಮುಖ್ಯ ಗುರಿ ಏನಾಗಿರಿಸಿಕೊಂಡಿದ್ದರು ಅನ್ನೋದರ ಮೇಲೆ. ಉಕ್ರೇನ್ ಆಡಳಿತ ಬದಲು ಮಾಡೋದು ತಮ್ಮ ಗುರಿ ಅಲ್ಲ ಅಂತ ರಷ್ಯ ಹೇಳಿಕೊಂಡಿತ್ತು. ಅದು ನಿಜವೇ ಆಗಿದ್ದು ನ್ಯಾಟೊ ವಿರುದ್ಧ ಬಫರ್ ಜೋನ್ ಸೃಷ್ಟಿಸಿಕೊಳ್ಳುವುದು ಪುಟಿನ್ ಗುರಿಯಾಗಿದ್ದಲ್ಲಿ ಅದರಲ್ಲಿ ರಷ್ಯ ಯಶಸ್ಸು ಕಾಣುತ್ತಿದೆ ಎಂಬುದು ಚೆಲ್ಲಾನಿ ಅವರ ವಿಶ್ಲೇಷಣೆ.

ಇದಕ್ಕೆ ಪೂರಕವಾಗಿ ಅವರು ನ್ಯಾಟೊ ಪಡೆಯ ಫ್ರಾನ್ಸ್ ಬಿಡುಗಡೆ ಮಾಡಿರುವ ರಷ್ಯ ಆಕ್ರಮಣ ಸ್ಥಿತಿ ವಿವರಣೆಯ ನಕಾಶೆಯನ್ನೇ ಎದುರಿಗಿಟ್ಟಿದ್ದಾರೆ. ಈ ನಕಾಶೆ ಪ್ರಕಾರ ರಷ್ಯವು 1) ಕ್ರಿಮಿಯಾಗೆ ನೆಲದ ಮೂಲಕ ಬೆಸೆಯುವಂಥದ್ದೊಂದು ಕಾರಿಡಾರ್ ನಿರ್ಮಾಣವಾಗುವ ರೀತಿಯಲ್ಲಿ ಉಕ್ರೇನ್ ಭೂಪ್ರದೇಶಗಳ ವಶವಾಗಿದೆ 2) ಅಜೋವ್ ತೀರವನ್ನು ಅಧೀನಕ್ಕೆ ತೆಗೆದುಕೊಂಡಿದೆ 3) ಕಪ್ಪು ಸಮುದ್ರದ ತೀರ ಪ್ರದೇಶಗಳನ್ನು ರಷ್ಯ ಬಹುತೇಕವಾಗಿ ಆಕ್ರಮಿಸಿಕೊಂಡಿದೆ.

ಹೀಗಾಗಿ, ಕಾರ್ಯಸೂಕ್ಷ್ಮ ಪ್ರದೇಶಗಳನ್ನಷ್ಟೇ ವಶಪಡಿಸಿಕೊಳ್ಳುವುದು ಪುಟಿನ್ ಉದ್ದೇಶವಿದ್ದಂತೆ ತೋರುತ್ತಿದೆ.

ಬ್ರಹ್ಮ ಚೆಲ್ಲಾನಿ ವಿಶ್ಲೇಷಿಸುವಂತೆ ಈ ಹಿಂದೆ ಅಮೆರಿಕದಂಥ ದೊಡ್ಡ ರಾಷ್ಟ್ರವು ಚಿಕ್ಕ ದೇಶಗಳ ಮೇಲೆ ಯುದ್ದ ಮಾಡಿದಾಗಲೂ ಮೊದಲ ಒಂದು ತಿಂಗಳು ಕೇವಲ ವೈಮಾನಿಕ ಪಡೆಯ ಮೂಲಕ ಬಾಂಬಿಂಗ್ ಮಾಡಿ ನಂತರವಷ್ಟೇ ನೆಲದಲ್ಲಿ ಯೋಧರನ್ನು ಮುಂದುವರಿಸಲಾಗಿದೆ. ಆದರೆ, ಅದು ನಗರಗಳನ್ನೆಲ್ಲ ನಾಮಾವಶೇಷ ಮಾಡಿಬಿಡುತ್ತದೆ. 1991ರಲ್ಲಿ ಅಮೆರಿಕವು ಇರಾಕ್ ಮೇಲೆ ದಾಳಿ ಮಾಡಿದಾಗ ಮೊದಲ 42 ದಿನ ಕೇವಲ ಆಕಾಶದಿಂದ ಬಾಂಬಿನ ಮಳೆಗರೆದು ನಂತರವಷ್ಟೆ ಇರಾಕ್ ನೆಲದ ಮೆಲೆ ಕಾಲಾಳುಗಳನ್ನು ಮುಂದೆ ಕಳುಹಿಸಿತ್ತು. ಲಿಬಿಯಾ ಮೇಲೆ 2011ರಲ್ಲಿ ನ್ಯಾಟೊ ಪಡೆಯ ಯುದ್ಧ ಆ ದೇಶವನ್ನು ಇವತ್ತಿಗೂ ವಿಫಲ ರಾಷ್ಟ್ರವಾಗಿಸಿದೆ.

ಈ ಹಿನ್ನೆಲೆಯಲ್ಲಿ ರಷ್ಯ ಬೇರೆಯದೇ ಮಾರ್ಗ ಅನುಸರಿಸಿದೆ ಎಂಬುದು ಚೆಲ್ಲಾನಿ ವಿಶ್ಲೇಷಣೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!