February 16, 2026
Monday, February 16, 2026
spot_img

ಹಾವೇರಿ ಜಿಲ್ಲೆಯಲ್ಲಿ ಇನ್ನೂ ಕೂಡ ಮ್ಯಾನುವಲ್ ಸ್ಕ್ಯಾವೆಂಜರ್ ಪದ್ಧತಿ ಜೀವಂತ?

ಹೊಸದಿಗಂತ ವರದಿ, ಹಾವೇರಿ :

ಮಲದ ಗುಂಡಿ ಸ್ವಚ್ಛಗೊಳಿಸಿ, ಮಲವನ್ನು ತಲೆಯ ಮೇಲೆ ಹೊತ್ತು ಸ್ವಚ್ಛಗೊಳಿಸುವ (ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್) ಅನಿಷ್ಟ ಪದ್ಧತಿ ಸಂಪೂರ್ಣ ನಿಷೇಧವಿದ್ದರೂ, ಜಿಲ್ಲೆಯ ಹಾನಗಲ್ಲ ತಾಲೂಕು ಕೂಸನೂರ ಗ್ರಾಮದಲ್ಲಿ ಇನ್ನೂ ಜೀವಂತವಿರುವುದು ಮಂಗಳವಾರ ಬೆಳಕಿಗೆ ಬಂದಿದೆ.

ಕೂಸನೂರ ಗ್ರಾಮದ ಸುರೇಶ ಪೂಜಾರ ಹಾಗೂ ಬಸವರಾಜ ಪೂಜಾರ ಅವರ ಶೌಚಾಲಯವನ್ನು ಯಾವುದೇ ಪರಿಕರಗಳಿಲ್ಲದೆ ಇಬ್ಬರು ಕಾರ್ಮಿಕರು ಮಲದ ಗುಂಡಿಯಿಂದ ಮಲವನ್ನು ಯಾವುದೇ ಯಂತ್ರೋಪಕರಣ ಇಲ್ಲದೇ ಎತ್ತಿ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಮಲದ ಗುಂಡಿ ಸ್ವಚ್ಚಗೊಳಿಸುತ್ತಿರುವ ವಿಡಿಯೋ ಲಭ್ಯವಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಕ್ಷಾ ಕವಚಗಳು ಅಥವಾ ಯಂತ್ರಗಳಿಲ್ಲದೆ ಈ ಕೆಲಸವನ್ನು ನಿರ್ವಹಿಸುವುದು. ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಕಾಯ್ದೆ-೨೦೧೩ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಯ್ದೆ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎನಿಸಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜಿಲ್ಲೆಯಲ್ಲಿ ಅನಿಷ್ಠ ಪದ್ಧತಿ ನಡೆಯುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಘಟನೆಗೆ ಕಾರಣರಾದ ಆರೋಪಿಗಳ ಮೇಲೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾನಗಲ್ಲ ತಹಸೀಲ್ದಾರ ರೇಣುಕಾ ಎಸ್. ಮಾತನಾಡಿ, ಘಟನೆ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮಲದ ಗುಂಡಿ ಸ್ವಚ್ಛಗೊಳಿಸಿದ ಕಾರ್ಮಿಕರಿಗೆ ಆಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !