October 1, 2026
Thursday, October 1, 2026
spot_img

SC, ST, ಅಲ್ಪಸಂಖ್ಯಾತರ ಮತಗಳೇ ಟಾರ್ಗೆಟ್: 50 ಲಕ್ಷಕ್ಕೂ ಹೆಚ್ಚು ಮತ ನಾಪತ್ತೆ, CEOಗೆ ಸಿಎಂ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅವಧಿಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗುರುವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ (CEO) ವಿ. ಅನ್ಬುಕುಮಾರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ನಕಲಿ ಫಾರ್ಮ್ 7 ಆಕ್ಷೇಪಣೆ ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಕೆ ಮಾಡುತ್ತಿರುವವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖರಿದ್ದರು. ಉನ್ನತ ಮಟ್ಟದ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಇದನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಮಾಡುತ್ತಿರುವ ‘ವೋಟ್ ಚೋರಿ’ ಕೃತ್ಯ ಎಂದು ಕರೆದರಲ್ಲದೆ, ಇದು ಪ್ರಜಾಪ್ರಭುತ್ವದ ಬೆನ್ನಿಗೆ ಇರಿದಂತೆ ಎಂದು ಕಿಡಿಕಾರಿದರು.

ನಿರ್ದಿಷ್ಟ ಕ್ಷೇತ್ರಗಳ ಮೇಲೆ ಕಣ್ಣು

ಕಾಂಗ್ರೆಸ್‌ನ ಹಿರಿಯ ಸಚಿವರು ಪ್ರತಿನಿಧಿಸುವ ಹಾಗೂ ಪಕ್ಷವು ಭಾರಿ ಮತಗಳ ಅಂತರದಿಂದ ಗೆದ್ದಿರುವ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡು 10,000 ದಿಂದ 20,000 ಮತಗಳನ್ನು ಡಿಲೀಟ್ ಮಾಡಲು ಸಂಚು ಹೂಡಲಾಗಿದೆ. ವಿಶೇಷವಾಗಿ ಸೆ. 22 ರಿಂದ 24 ರ ನಡುವೆ ಮೂಡಿಗೆರೆಯಲ್ಲಿ 6,259, ಬೆಳಗಾವಿ ಉತ್ತರದಲ್ಲಿ ಸುಮಾರು 3,000, ಭಾಲ್ಕಿಯಲ್ಲಿ 2,285, ಬಾಬಲೇಶ್ವರದಲ್ಲಿ 1,373 ಮತ್ತು ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ 1,200 ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಸಲಾಗಿದೆ.

ಶೋಷಿತ ವರ್ಗಗಳೇ ಟಾರ್ಗೆಟ್

ಚುನಾವಣಾ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸಲ್ಲಿಕೆಯಾಗಿರುವ ಫಾರ್ಮ್ 7 ಅರ್ಜಿಗಳಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (OBC) ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನೇ ಪ್ರಮುಖವಾಗಿ ಗುರಿಯಾಗಿಸಲಾಗಿದೆ ಎಂದು ಸಿಎಂ ದೂರಿದ್ದಾರೆ. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಗೌಪ್ಯ ದತ್ತಾಂಶ ಸೋರಿಕೆ ಆರೋಪ

 ಮತದಾರರ ಹೆಸರು, ವಿಳಾಸ ಹಾಗೂ ಎಪಿಕ್ ಸಂಖ್ಯೆಗಳನ್ನು ಮುಂಚಿತವಾಗಿಯೇ ಮುದ್ರಿಸಿರುವ ಅರ್ಜಿಗಳನ್ನು ಎಲ್ಲ 224 ಕ್ಷೇತ್ರಗಳಿಗೂ ಕಳುಹಿಸಲಾಗಿದೆ. ಚುನಾವಣಾ ಆಯೋಗದ ಅತ್ಯಂತ ಗೌಪ್ಯ ದಾಖಲೆಗಳು ಸೋರಿಕೆಯಾಗಿದ್ದು ಹೇಗೆ? ಎಂದು ಸಿಎಂ ಪ್ರಶ್ನಿಸಿದರು.

ಸ್ಥಳೀಯ ಬಿಜೆಪಿ ಮುಖಂಡರ ಒಪ್ಪಿಗೆ

ಬಳ್ಳಾರಿ ಮತ್ತು ವಿಜಯಪುರಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಹೆದರಿ ಸಾವಿರಾರು ನಕಲಿ ಅರ್ಜಿಗಳನ್ನು ಸಲ್ಲಿಕೆದಾರರೇ ವಾಪಸ್ ಪಡೆದಿದ್ದಾರೆ. ಜೊತೆಗೆ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಸಾಮೂಹಿಕವಾಗಿ ಅರ್ಜಿ ಸಲ್ಲಿಸಲು ಜನರನ್ನು ಸೇರಿಸಿದ್ದಾಗಿ ಒಪ್ಪಿಕೊಂಡಿರುವ ವಿಡಿಯೋ ಮತ್ತು ಸಾರ್ವಜನಿಕ ಹೇಳಿಕೆಗಳು ಲಭ್ಯವಿವೆ ಎಂದು ವಿವರಿಸಿದರು.

ಇದನ್ನೂ ಓದಿ:

ನ್ಯಾಯ ಸಿಗುವವರೆಗೂ ಕದಲುವುದಿಲ್ಲ

ಮತದಾರರ ಹಕ್ಕು ರಕ್ಷಿಸುವುದು ಮುಖ್ಯಮಂತ್ರಿಯಾಗಿ ಸಂವಿಧಾನಬದ್ಧ ಕರ್ತವ್ಯವಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ ನೀಡಬೇಕು. ಈ ವಿಷಯದಲ್ಲಿ ಸೂಕ್ತ ಕ್ರಮ ಜರುಗಿಸಿ ನ್ಯಾಯ ಸಿಗುವವರೆಗೂ ನಾನು ಸಿಇಒ ಕಚೇರಿಯಿಂದ ಹೊರಹೋಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಧರಣಿಯ ಎಚ್ಚರಿಕೆ ನೀಡಿದ್ದಾರೆ.

Must Read