ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ ತೊಳೆಯುವುದು ನಮಗೆಲ್ಲ ಅತ್ಯಂತ ಸರಳ ಹಾಗೂ ದೈನಂದಿನ ಕೆಲಸ. ಆದರೆ, ನಾವು ತಿಳಿಯದೆ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಮುಖದ ಕಾಂತಿಯನ್ನು ಕಸಿದುಕೊಂಡು, ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ನೀವು ಎಷ್ಟೇ ದುಬಾರಿ ಕ್ರೀಮ್ ಅಥವಾ ಫೇಸ್ವಾಶ್ ಬಳಸಿದರೂ, ಮುಖ ತೊಳೆಯುವ ಸರಿಯಾದ ವಿಧಾನ ತಿಳಿಯದಿದ್ದರೆ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ.
ಮುಖ ತೊಳೆಯುವಾಗ ಪ್ರತಿಯೊಬ್ಬರೂ ಗಮನಿಸಬೇಕಾದ ಪ್ರಮುಖ ವಿಷಯಗಳು ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?
ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಫೇಸ್ವಾಶ್ ಬಳಸಿ ಮುಖ ತೊಳೆಯುವುದರಿಂದ, ಚರ್ಮದಲ್ಲಿರುವ ನೈಸರ್ಗಿಕ ತೇವಾಂಶ ಪೂರ್ತಿಯಾಗಿ ಹೊರಟುಹೋಗುತ್ತದೆ. ಇದರಿಂದ ಚರ್ಮ ಅತಿಯಾಗಿ ಒಣಗಿ, ರಕ್ಷಣೆಗಾಗಿ ಚರ್ಮವೇ ಹೆಚ್ಚಿನ ಎಣ್ಣೆಯನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಮೊಡವೆಗಳು ಹೆಚ್ಚಾಗುತ್ತವೆ.
ಚಳಿ ಅಥವಾ ಆಯಾಸವೆಂದು ಅತಿಯಾದ ಬಿಸಿ ನೀರಿನಿಂದ ಮುಖ ತಳೆದರೆ ಚರ್ಮದ ನೈಸರ್ಗಿಕ ರಕ್ಷಣಾ ಕವಚ ಹಾಳಾಗುತ್ತದೆ. ಇದರಿಂದ ಚರ್ಮವು ಕೆಂಪಗಾಗುವುದು, ಕಿರಿಕಿರಿ ಮತ್ತು ಸುಕ್ಕುಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಯಾವಾಗಲೂ ಉಗುರುಬೆಚ್ಚಗಿನ ಅಥವಾ ತಣ್ಣನೆಯ ನೀರನ್ನೇ ಬಳಸಿ.
ಪ್ರತಿಯೊಬ್ಬರ ಚರ್ಮದ ಶೈಲಿಯೂ ವಿಭಿನ್ನ. ಎಣ್ಣೆಯುಕ್ತ, ಒಣ ಅಥವಾ ಸಂವೇದನಶೀಲ ಚರ್ಮಕ್ಕೆ ತಕ್ಕಂತೆ ಫೇಸ್ವಾಶ್ ಆಯ್ಕೆ ಮಾಡಬೇಕು. ಕೇವಲ ಜಾಹೀರಾತು ನೋಡಿ ಅಥವಾ ಸುಗಂಧ ಹೆಚ್ಚಾಗಿದೆ ಎಂದು ಕೆಮಿಕಲ್ ಭರಿತ ಸೋಪ್/ಫೇಸ್ವಾಶ್ ಬಳಸಿದರೆ ಚರ್ಮದ ಕಿರಿಕಿರಿ ಉಂಟಾಗುತ್ತದೆ.
ಮೇಕ್ಅಪ್ ಹಾಕಿಕೊಂಡಿದ್ದಾಗ ನೇರವಾಗಿ ಫೇಸ್ವಾಶ್ನಿಂದ ಮುಖ ತೊಳೆದರೆ ಮೇಕ್ಅಪ್ನ ಕಣಗಳು ಚರ್ಮದ ರಂಧ್ರಗಳಲ್ಲೇ ಉಳಿದುಕೊಳ್ಳುತ್ತವೆ. ಮೊದಲು ಮೈಸೆಲಾರ್ ವಾಟರ್ ಅಥವಾ ಕೊಬ್ಬರಿ ಎಣ್ಣೆಯಿಂದ ಮೇಕ್ಅಪ್ ತೆಗೆದು, ನಂತರ ಮುಖ ತೊಳೆಯುವುದು ಸೂಕ್ತ.
ಮುಖ ತೊಳೆದ ನಂತರ ಟವೆಲ್ನಿಂದ ರಫ್ ಆಗಿ ಒರೆಸಬಾರದು. ಮೆದುವಾದ ಟವೆಲ್ ಬಳಸಿ ಹಗುರವಾಗಿ ಒತ್ತಿ ನೀರನ್ನು ತೆಗೆಯಬೇಕು. ಅಲ್ಲದೆ, ಪ್ರತಿದಿನ ಬಳಸುವ ಟವೆಲ್ ಸ್ವಚ್ಛವಾಗಿರಬೇಕು.
ಸರಿಯಾದ ವಿಧಾನದಲ್ಲಿ ಮುಖ ತೊಳೆಯುವ ಸಣ್ಣ ಅಭ್ಯಾಸವು ನಿಮ್ಮ ಚರ್ಮಕ್ಕೆ ಹೊಸ ಕಳೆಯನ್ನು ನೀಡುತ್ತದೆ. ನಿಮ್ಮ ದಿನನಿತ್ಯದ ಚರ್ಮದ ಆರೈಕೆಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡು ಆರೋಗ್ಯಕರ ಚರ್ಮ ನಿಮ್ಮದಾಗಿಸಿಕೊಳ್ಳಿ.



