ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಕಚೇರಿಯಲ್ಲೇ ಬರ್ಥ್‌ಡೇ ಸೆಲೆಬ್ರೇಟ್ ಮಾಡಿಕೊಂಡ ಐವರನ್ನು ಸಸ್ಪೆಂಡ್ ಮಾಡಲಾಗಿದೆ. ಇಲಾಖೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಡಗೂಡಿ ಹುಟ್ಟುಹಬ್ಬ ಆಚರಿಸಿ, ಸಂಭ್ರಮಿಸಿದ ಆರೋಪದ ಮೇಲೆ ಇಂಜಿನಿಯರ್ಗಳು ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಸಹಾಯಕ ಇಂಜಿನಿಯರ್ಗಳಾದ ಲಾವಣ್ಯ, ಮೀನಾ ಎ.ಟಿ., ನವೀನ್, ಅಮೀನ್ ಎಸ್.ಆನದಿನ್ನಿ ಮತ್ತು ಪ್ರಥಮ ದರ್ಜೆ ಸಹಾಯಕರಾದ ಜಿ.ಹೆಚ್.ಚಿಕ್ಕಪ್ಪೇಗೌಡ ಎಂಬುವರು ಅಮಾನತುಗೊಂಡ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಾಗಿದ್ದಾರೆ.
ಹೈಕೋರ್ಟ್ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡದ ಉಪ ವಿಭಾಗದ ಕಚೇರಿಯಲ್ಲಿ ಕಳೆದ ತಿಂಗಳು ಮಾರ್ಚ್ 10ರಂದು ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಮೀನಾ ಎ.ಟಿ. ಅವರ ಹುಟ್ಟುಹಬ್ಬ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಬೇರೆ ಕಚೇರಿಗಳಲ್ಲಿ ಸಹಾಯಕ ಇಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್, ಅಮೀನ್ ಎಸ್. ಆನದಿನ್ನಿ ಮತ್ತು ಇತರರು ಪಾಲ್ಗೊಂಡಿದ್ದರು.
ಸರ್ಕಾರಿ ಕಚೇರಿಗಳಲ್ಲಿ ಯಾವುದೇ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಅನುಮತಿ ಪಡೆಯದೇ ಹುಟ್ಟುಹಬ್ಬ ಆಚರಣೆ ಮಾಡಿದ್ದಲ್ಲದೇ ಕಚೇರಿಯ ಸಿಸಿಟಿವಿಗಳನ್ನು ಆಫ್ ಮಾಡಲಾಗಿದೆ. ಹೈಕೋರ್ಟ್ನಲ್ಲಿ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ಸ್ವಿಚ್ ಆಫ್ ಮಾಡಿರುವುದು ಸಹ ಗಂಭೀರ ಸ್ವರೂಪದ ಕರ್ತವ್ಯಲೋಪವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.