ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಸಾವಿರಾರು ಕ್ಯೂಸೆಕ್ ನೀರು ಪೋಲಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.
ಭಾನುವಾರ ರಾತ್ರಿ ಏಕಾಏಕಿ ಕೆಆರ್‌ಎಸ್ ಡ್ಯಾಂನ +80 ಗೇಟ್ ಓಪನ್ ಆಗಿ ನದಿಗೆ ನೀರು ಹರಿದು ವ್ಯರ್ಥವಾಗಿದೆ. ಭಾನುವಾರ ರಾತ್ರಿ ಓಪನ್ ಆಗಿರುವ ಗೇಟ್‌ನಿಂದ ಸೋಮವಾರ ರಾತ್ರಿಯವರೆಗೂ ಡ್ಯಾಂ ನೀರು ಹರಿದು ನದಿ ಸೇರಿದೆ. ಗೇಟ್ ಓಪನ್ ಆಗಿದ್ದರೂ ಸಹ ಅಧಿಕಾರಿಗಳು ಗೇಟ್ ಮುಚ್ಚದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ 2 ಸಾವಿರ ಕ್ಯೂಸೆಕ್ ನೀರು ನದಿ ಪಾಲು ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೇಟ್ ಇದ್ದಕ್ಕಿದ್ದಂತೆ ಯಾಕೆ? ಹೇಗೆ? ಓಪನ್ ಆಯಿತು ಎಂಬುದು ಇನ್ನೂ ನಿಗೂಢವಾಗಿದೆ. ಸಿಬ್ಬಂದಿಗಳ ಯಡವಟ್ಟಿನಿಂದ ಗೇಟ್ ಓಪನ್ ಆಯ್ತಾ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಅಥವಾ ಸಮಸ್ಯೆ ಉಂಟಾಗಿ ಓಪನ್ ಆಯ್ತಾ ಎಂಬುದು ಅಸ್ಪಷ್ಟವಾಗಿದೆ. ಸದ್ಯ ಅಧಿಕಾರಿಗಳು ಸಿಬ್ಬಂದಿಗಳು ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೇಟ್ ಬಂದ್ ಮಾಡಿದ್ದಾರೆ. ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದಿದ್ದರಿಂದ ಹರಸಾಹಸಪಟ್ಟು ಗೇಟ್ ಬಂದ್ ಮಾಡಿದ್ದಾರೆ.