ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಇಶಾನ್ ಕಿಶಾನ್ ತಲೆಗೆ ಪೆಟ್ಟು ಬಿದ್ದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀಲಂಕಾದ ಲಹಿರು ಕುಮಾರ್ ಅವರ ಬೌನ್ಸರ್ ಇಶಾನ್ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಭಾರತದ ವೈದ್ಯಕೀಯ ತಂಡ ಅವರ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಕಿಶಾನ್ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್ ಆರಂಭಿಸಿದ್ದರು.
ದಿನದ ಪಂದ್ಯ ಮುಗಿದ ನಂತರ ಅವರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಿ, ಮೆದುಳು ಸ್ನ್ಯಾನ್ ಮಾಡಲಾಗಿದೆ. ಹೆಚ್ಚಿನ ನಿಗಾ ವಹಿಸಲು ಇಂದು ರಾತ್ರಿ ಕಿಶಾನ್ ಆಸ್ಪತ್ರೆಯಲ್ಲೇ ಉಳಿಯಬಹುದು ಎಂದು ಬಿಸಿಸಿಐ ತಿಳಿಸಿದೆ.
ಇನ್ನು ಇಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಇಶಾನ್ ಕಿಶಾನ್ ಹೊರಗುಳಿಯುವ ಸಾಧ್ಯತೆ ಇದ್ದು, ಕಿಶಾನ್ ಸ್ಥಾನಕ್ಕೆ ಮಾಯಾಂಕ್ ಅಗರ್ವಾಲ್ ಅಥವಾ ವೆಂಕಟೇಶ್ ಅಯ್ಯರ್ ಫೀಲ್ಡ್ ಗೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.