ಕೆಳದಿ ಅಭಿವೃದ್ಧಿಗೆ ತೀರ್ಮಾನಿಸಿದ ಕರ್ನಾಟಕ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೆಳದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಳದಿ ಚೆನ್ನಮ್ಮನ ಪಟ್ಟಾಭಿಷೇಕದ ದಿನದಂದು ಆಚರಣೆ ಮಾಡುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಮುಂದಿನ ವರ್ಷ ಕೆಳದಿಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಸರಕಾರ ತೀರ್ಮಾನಿಸಿದೆ ಎಂದರು.

ಕೆಳದಿ ಚೆನ್ನಮ್ಮ ಒಬ್ಬ ಧೀರ ಮಹಿಳೆ. ಇಂತಹ ವೀರ ಮಹಿಳೆಯರನ್ನು ಗುರುತಿಸುವ ಮೂಲಕ ಕರ್ನಾಟಕದ ಭವ್ಯ ಪರಂಪರೆಯ ಜೊತೆಗೆ ಭವಿಷ್ಯವನ್ನು ನಿರ್ಮಾಣ ಮಾಡಬಹುದು ಎಂದರು.

ಪ್ರಗತಿಪರ ನಿಲುವಿನ ಚೆನ್ನಮ್ಮ:
ಕರ್ನಾಟಕ ರಾಜ್ಯಕ್ಕೆ ತನ್ನದೇ ಸಂಸ್ಕೃತಿ, ಹೋರಾಟ, ಭಾಷೆ, ಜೀವನಶೈಲಿ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಹೊಂದಿದೆ. ಇವೆಲ್ಲವೂ ಸಮಗ್ರವಾಗಿ ಸೇರಿದಾಗ ಮಾತ್ರ ಅದು ಕರ್ನಾಟಕವಾಗುತ್ತದೆ. ಇದರಲ್ಲಿ ಕೆಳದಿ ಚನ್ನಮ್ಮನ ಪಾತ್ರ ದೊಡ್ಡದಿದೆ. ಮಹಿಳೆಯೊಬ್ಬಳು ಕಂದಾಚಾರವನ್ನು ಬಿಟ್ಟು ಪ್ರಗತಿಪರ ಚಿಂತನೆಯಿಂದ ಆ ಕಾಲದಲ್ಲಿ ತನ್ನ ನಿಲುವು ಹಾಗೂ ಗಟ್ಟಿತನಗಳನ್ನು ತೋರಿದಳು. ದೂರದೃಷ್ಟಿ, ಕ್ಷಮಿಸುವ ದೊಡ್ಡ ಗುಣ ಆಕೆಯಲ್ಲಿತ್ತು. ಚೆನ್ನಮ್ಮನ ಅಸ್ತಿತ್ವಕ್ಕೆ ಧಕ್ಕೆ ತಂದು ಮೂರು ಬಾರಿ ಆಕ್ರಮಿಸಿದವರನ್ನು ಕ್ಷಮಿಸಿ ಆಶ್ರಯ ನೀಡುವುದು ಅಪರೂಪ. ಕಿತ್ತೂರು ಚೆನ್ನಮ್ಮ ಆ ಭಾಗದಲ್ಲಿ ಹೋರಾಡಿದಂತೆಯೇ ಕೆಳದಿ ಚೆನ್ನಮ್ಮನ ಹೋರಾಟವೂ ರೋಮಾಂಚಕವಾಗಿದೆ. ನಮ್ಮ ಮಕ್ಕಳಿಗೆ ಇವರ ಬಗ್ಗೆ ಪಠ್ಯ ಮುಖೇನ ತಿಳಿಸುವ ಆವಶ್ಯಕತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೋಲಿಯೋ ಹಾಗೂ ಕೆಳದಿ ಚನ್ನಮ್ಮನ ಕಾರ್ಯಕ್ರಮ ಒಟ್ಟಿಗೆ ನಡೆದಿರುವುದು ಆರೋಗ್ಯ ಹಾಗೂ ಐತಿಹಾಸಿಕ ಕರ್ನಾಟಕದ ಸಂಗಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!