ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಬೆಂಬಲಿತ ಹೆಜ್ಬೊಲ್ಲಾ ಬಂಡುಕೋರರ ಮೇಲೆ ದಾಳಿ ಮುಂದುವರೆಸಿರುವ ಇಸ್ರೇಲ್ ಸೇನೆ ಇಂದು ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ನನ್ನು ಹೊಡೆದುರುಳಿಸಿದೆ.
ತನ್ನ ಗುಪ್ತಚರ ಸಂಸ್ಥೆ ನೀಡಿದ್ದ ಮಾಹಿತಿ ಆಧಾರದ ಮೇಲೆ ಬೈರುತ್‌ನಲ್ಲಿ ವಾಯುದಾಳಿ ನಡೆಸಿದ ಇಸ್ರೇಲ್ ಸೇನೆ ಹೆಜ್ಬೊಲ್ಲಾದ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿಯನ್ನು ಹತ್ಯೆ ಮಾಡಿದೆ.
ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ಮಾಹಿತಿ ನೀಡಿದ್ದು, ಮೃತ ಸಕಾಫಿ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದ. ಆತ 2000 ರಿಂದ ಸಂಘಟನೆಯ ಸಂವಹನ ಘಟಕದ ಮುಖ್ಯಸ್ಥನಾಗಿದ್ದ. ಹೆಜ್ಬೊಲ್ಲಾದ ಎಲ್ಲಾ ಘಟಕಗಳ ನಡುವೆ ಸಂವಹನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಕಾಫಿ ಗಮನಾರ್ಹ ಪ್ರಯತ್ನಗಳನ್ನು ನಡೆಸಿದ್ದ ಎಂದು ಐಡಿಎಫ್ ಮಾಹಿತಿ ನೀಡಿದೆ.
ಬೈರುತ್‌ನ ದಕ್ಷಿಣದ ಉಪನಗರವಾದ ದಹಿಯೆಹ್, ಇರಾನ್ ಬೆಂಬಲಿತ ಹಿಜ್ಬುಲ್ಲಾದ ಭದ್ರಕೋಟೆಯಾಗಿದ್ದು, ಗುರುವಾರ ಮಧ್ಯರಾತ್ರಿ ವೇಳೆ ಇಸ್ರೇಲ್ ವಾಯುಸೇನೆ ದಾಳಿ ನಡೆಸಿ ಮೊಹಮ್ಮದ್ ರಶೀದ್ ಸಕಾಫಿಯನ್ನು ಹೊಡೆದುರುಳಿಸಿದೆ.
ಇಸ್ರೇಲ್ ಸೇನೆ (IDF) ದಕ್ಷಿಣ ಲೆಬನಾನ್‌ನಲ್ಲಿಯೂ ದಾಳಿಗಳನ್ನು ನಡೆಸಿದ್ದು, ರಾಕೆಟ್ ಲಾಂಚರ್, ಯುದ್ಧಸಾಮಗ್ರಿಗಳು, ಟ್ಯಾಂಕ್ ವಿರೋಧಿ ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಒಳಗೊಂಡಂತೆ ಬಂಡುಕೋರರ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲು ಮತ್ತು ವಶಪಡಿಸಿಕೊಳ್ಳಲು ಕಾರಣವಾಯಿತು. ಶುಕ್ರವಾರ ಮುಂಜಾನೆ ಬೈರುತ್‌ನ ಮುಖ್ಯ ವಿಮಾನ ನಿಲ್ದಾಣದ ಸಮೀಪದಲ್ಲೇ ಇಸ್ರೇಲ್ ಸೇನೆ ದಾಳಿ ನಡೆಸಿದೆ.