ಗಾಜಾದ ಆಂಬ್ಯುಲೆನ್ಸ್ ಮೇಲೆ ಇಸ್ರೇಲ್ ದಾಳಿ: 15 ಮಂದಿ ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಗಾಜಾ ನಗರದಲ್ಲಿರುವ ಅಲ್‌-ಶಿಫಾ (Al-Shifa) ಆಸ್ಪತ್ರೆ ಎದುರಿರುವ ಆಂಬುಲೆನ್ಸ್‌ಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ 15 ಮಂದಿ ಸಾವನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಗಾಜಾದ ಆಸ್ಪತ್ರೆಯ ಬಳಿಯಿದ್ದ ಆಂಬ್ಯುಲೆನ್ಸ್‌ಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇದು ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಯಾಗಿದೆ. ಯುದ್ಧ ವಲಯದಲ್ಲಿ ಹಮಾಸ್ ಉಗ್ರರು ಬಳಸುತ್ತಿದ್ದ ಆಂಬ್ಯುಲೆನ್ಸ್ ಅನ್ನು ಗುರುತಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಈ ಘಟನೆಯ ಬಳಿಕ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಹೇಳಿದೆ. ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಈ ಯುದ್ಧ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಹಮಾಸ್ ನಡೆಸಿರುವ ದಾಳಿಯಲ್ಲಿ ಈವರೆಗೆ 1,400ಕ್ಕೂ ಹೆಚ್ಚಿನ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೆ ಗಾಜಾದ ಮೇಲಿನ ಇಸ್ರೇಲ್ ದಾಳಿಯಲ್ಲಿ 3,826 ಮಕ್ಕಳು ಸೇರಿದಂತೆ ಕನಿಷ್ಠ 9,227 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!