ಹೊಸದಿಗಂತ ಡಿಜಿಟಲ್ ಡೆಸ್ಕ್;
ಗಾಜಾದ ತಬೀನ್ ಶಾಲೆ ಮೇಲೆ ಇಸ್ರೇಲ್ ಶನಿವಾರ ವಾಯುದಾಳಿ ನಡೆಸಿದ ಪರಿಣಾಮ ಕನಿಷ್ಠ 93 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.
ಈ ದಾಳಿಯ ಹೊಣೆಯನ್ನು ಇಸ್ರೇಲ್ ಸೇನೆ ಹೊತ್ತಿದೆ.
ಶಾಲೆಯಲ್ಲಿ ಹಮಾಸ್ ಬಂಡುಕೋರರು ಅಡಗಿದ್ದರು. ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಆದರೆ, ಇಸ್ರೇಲ್ ಆರೋಪವನ್ನು ಹಮಾಸ್ ತಳ್ಳಿಹಾಕಿದೆ.
ಆಶ್ರಯ ಪಡೆದಿದ್ದವರು ಶಾಲೆಯೊಳಗಿದ್ದ ಮಸೀದಿಯಲ್ಲಿ ನಸುಕಿನ ಜಾವ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಹಲವರು ಮಲಗಿದ್ದಾಗ ಮೂರು ಕ್ಷಿಪಣಿಗಳ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದಾಳಿಯಿಂದ ಶಾಂತಿ ಸ್ಥಾಪಿಸುವ ಪ್ರಯತ್ನಗಳಿಗೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಜೋರ್ಡಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.’ಗಾಜಾದಲ್ಲಿ ಸಾಮೂಹಿಕ ಹತ್ಯೆ ನಡೆಯುವುದನ್ನು ತಡೆಯಬೇಕು’ ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ.