ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಪ್ಯಾಲೆಸ್ತೇನ್ (Palestine) ಕಾರ್ಮಿಕರ ಬದಲು ಭಾರತದ (India) ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಹಮಾಸ್ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್ ಕಾರ್ಮಿಕರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಪ್ಯಾಲೆಸ್ತೇನ್ ಪ್ರಜೆಗಳ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ (Construction) ಉದ್ಯಮವು ಸರ್ಕಾರವನ್ನು ಕೇಳಿದೆ ಎಂದು ವರದಿಯಾಗಿದೆ.
ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬೇಡಿಕೆಗೆ ಅನುಮತಿ ನೀಡಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ. ಇಡೀ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಾಗುವಂತೆ ಭಾರತದಿಂದ 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ವೆಸ್ಟ್ ಬ್ಯಾಂಕ್‌ನ ವಾಯ್ಸ್ ಆಫ್ ಅಮೇರಿಕಾ ವರದಿಯು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇಸ್ರೇಲಿ ನಿರ್ಮಾಣ ಉದ್ಯಮದಲ್ಲಿ ಉದ್ಯೋಗಿಯಾಗಿರುವ ಕಾರ್ಮಿಕರ ಪೈಕಿ ಪ್ಯಾಲೆಸ್ತೇನಿಯನ್ನರು ಸರಿಸುಮಾರು 25 ಪ್ರತಿಶತವನ್ನು ಹೊಂದಿದ್ದಾರೆ. ನಾವು ಈಗ ಯುದ್ಧದಲ್ಲಿದ್ದೇವೆ. ನಮ್ಮ ಮಾನವ ಸಂಪನ್ಮೂಲದ ಸುಮಾರು 25 ಪ್ರತಿಶತದಷ್ಟು ಇರುವ ಪ್ಯಾಲೆಸ್ತೇನ್ ಕೆಲಸಗಾರರು ಬರುತ್ತಿಲ್ಲ. ಇವರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅನುಮತಿ ಇಲ್ಲ ಎಂದು ಫೀಗ್ಲಿನ್ ಹೇಳಿದ್ದಾರೆ.
ಅದಕ್ಕಾಗಿ ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲ್ 42 ಸಾವಿರ ಭಾರತೀಯರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ನಿರ್ಮಾಣ ಮತ್ತು ನರ್ಸಿಂಗ್ ಕ್ಷೇತ್ರಗಳಲ್ಲಿ 42 ಸಾವಿರ ಭಾರತೀಯ ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ತಮ್ಮ ದೇಶದ ಮೇಲಿನ ದಾಳಿ ದೇಶದಲ್ಲಿ ಉದ್ಯೋಗದಲ್ಲಿದ್ದ ಪ್ಯಾಲೆಸ್ತೀನ್ ಕಾರ್ಮಿಕರು ಕಾರಣ. ಅವರು ನಮ್ಮ ದೇಶದ ಬಗ್ಗೆ ಹಮಾಸ್ ಉಗ್ರರಿಗೆ ಮಾಹಿತಿ ನೀಡಿದ್ದರು ಎಂಬ ಕಾರಣ ನೀಡಿ ಇಸ್ರೇಲ್ ಕಳೆದ ವಾರ ಗಾಜಾಗೆ ಗಡಿಪಾರು ಮಾಡಿದೆ.
ಇಸ್ರೇಲ್‌ನ ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.