ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ಖಾನ್ ಯೂನಿಸ್ ನಗರದ ಮೇಲೆ ಸೋಮವಾರ ಇಸ್ರೇಲ್ ದಾಳಿ ನಡೆಸಿದೆ.ಕನಿಷ್ಠ 16 ಮಂದಿ ಸಾವಿಗೀಡಾಗಿದ್ದಾರೆ.ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಿಂದ ಬಿಟ್ಟು ಹೋಗುವಂತೆ ಇಸ್ರೇಲ್ ಪಡೆಗಳು ಆದೇಶಿಸುತ್ತಿದ್ದು, ಹಲವು ಕುಟುಂಬಗಳು ಹಾಗೂ ನಿರಾಶ್ರಿತರು ಅಲ್ಲಿಂದ ತೆರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಾಜಾದಲ್ಲಿ ಕದನ ವಿರಾಮಕ್ಕೆ ಹಲವು ರಾಷ್ಟ್ರಗಳು ಒತ್ತಾಯಿಸುತ್ತಿದ್ದರೂ, ಇಸ್ರೇಲ್ ದಾಳಿ ಮುಂದುವರಿಸಿದೆ.
2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ ಬಳಿಕ 39,897 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ. 92,152 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಟಿಪ್ಪಣಿಯಲ್ಲಿ ಹೇಳಿದೆ.
ಕಳೆದ 48 ಗಂಟೆಯಲ್ಲಿ 107 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ. ಶನಿವಾರ ಗಾಜಾ ನಗರದಲ್ಲಿರುವ ಶಾಲೆಯ ಮೇಲೆ ಇಸ್ರೇಲ್ ಮಾಡಿದ ದಾಳಿಯಿಂದಾಗಿ ಸುಮಾರು 100 ಜನ ಸಾವಿಗೀಡಾಗಿದ್ದಾರೆ.