ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಅಗ್ರಸ್ಥಾನ ಪಡೆದುಕೊಂಡಿದೆ.
ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಹಾಗೂ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್) ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಐಐಟಿ ಬಾಂಬೆ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿರುವ ಏಮ್ಸ್ ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜು ಎಂಬುದಾಗಿ ಎನ್‌ಐಆರ್‌ಎಫ್ ಪ್ರಕಟಿಸಿದೆ. ಪಿಜಿಐ ಚಂಡೀಗಢ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ.
ಹಿಂದಿನ ವರ್ಷದ ಶ್ರೇಯಾಂಕದಂತೆಯೇ ಏಮ್ಸ್ ದೆಹಲಿಯು ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಡೆಂಟಲ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಚೆನ್ನೈನ ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಆಂಡ್ ಟೆಕ್ನಿಕಲ್ ಸೈನ್ಸಸ್ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದೆ. ಹೊಸದಿಲ್ಲಿಯ ಜಾಮಿಯಾ ಹಮ್ದರ್ದ್ ಫಾರ್ಮಸಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಟಾಪ್ ಐದರ ಸ್ಥಾನದಲ್ಲಿರುವ ಕಾಲೇಜುಗಳು
ವೈದ್ಯಕೀಯ ಕಾಲೇಜು ವಿಭಾಗದಲ್ಲಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್(ನಿಮ್ಹಾನ್ಸ್) , ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಕ್ರಮವಾಗಿ ಸ್ಥಾನ ಪಡೆದಿವೆ.
ದಂತ ಕಾಲೇಜು ವಿಭಾಗದಲ್ಲಿ ಚೆನ್ನೈನ ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ನವದೆಹಲಿಯ ಮೌಲಾನಾ ಆಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಗಳು, ಪುಣೆಯ ಡಾ. ಡಿ.ವೈ. ಪಾಟೀಲ್ ವಿದ್ಯಾಪೀಠ ಕ್ರಮವಾಗಿ ಸ್ಥಾನ ಪಡೆದಿವೆ.
ಫಾರ್ಮಸಿ ವಿಭಾಗದಲ್ಲಿ ಯಾವ ಕಾಲೇಜು?
ಹತ್ತು ಅತ್ಯುತ್ತಮ ಔಷಧಾಲಯ ವಿಭಾಗದಲ್ಲಿ ದೆಹಲಿಯ ಜಾಮಿಯಾ ಹಮ್ದರ್ದ್, ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಪಿಲಾನಿಯಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಊಟಿಯ ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಮುಂಬಯಿ ನ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮೊಹಾಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮುಂಬಯಿನ ಎಸ್‌ವಿಕೆಎಂನ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸ್ಥಾನ ಪಡೆದಿದೆ.
ಎನ್‌ಐಆರ್‌ಎಫ್ ಶ್ರೇಯಾಂಕ ಎಂದರೇನು?
ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಇದನ್ನು ಪ್ರಾರಂಭಿಸಿದರು. ಇದು ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುತ್ತದೆ.
ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ.