ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಾವು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಷಯವನ್ನು ಇದೀಗ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯ ಬಗ್ಗೆ ಈವರೆಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಅವರು, ಇದೀಗ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಘೋಷಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, “ನಾನು ಪ್ರಾಸ್ಟೇಟ್ ಕ್ಯಾನ್ಸರ್ ಎಂಬ ವೈದ್ಯಕೀಯ ಸಮಸ್ಯೆಯನ್ನು ಎದುರಿಸಿದ್ದೆ. ದೇವರಿಗೆ ಧನ್ಯವಾದಗಳು, ಈಗ ನಾನು ಆ ಕಾಯಿಲೆಯನ್ನು ಜಯಿಸಿದ್ದೇನೆ ಮತ್ತು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧ ಮತ್ತು ತೀವ್ರ ಸಂಘರ್ಷದ ಪರಿಸ್ಥಿತಿಯಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಲು ಸಾಧ್ಯವಾಗಲಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಅವರು ಹಂಚಿಕೊಂಡಿರುವ ಪ್ರಮುಖ ಮೂರು ಅಂಶಗಳು ಇಲ್ಲಿವೆ:
ಪ್ರಸ್ತುತ ತಾವು ಅತ್ಯುತ್ತಮ ದೈಹಿಕ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಪ್ರಾಸ್ಟೇಟ್‌ನಲ್ಲಿದ್ದ ಸಮಸ್ಯೆಗೆ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿದ ಜೆರುಸಲೆಮ್‌ನ ಹಡಸ್ಸಾ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಪ್ರಧಾನಿ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮನ್ನು ಕಾಡಿದ ಕಾಯಿಲೆಯನ್ನು ಜಯಿಸಿದ ನಂತರ, ಇಸ್ರೇಲ್ ನಾಗರಿಕರಿಗೆ ನೆತನ್ಯಾಹು ಒಂದು ಮುಖ್ಯ ಸಂದೇಶ ನೀಡಿದ್ದಾರೆ. “ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿ ಮತ್ತು ವೈದ್ಯರ ಸೂಚನೆಗಳನ್ನು ತಪ್ಪದೇ ಅನುಸರಿಸಿ,” ಎಂದು ಅವರು ವಿನಂತಿಸಿದ್ದಾರೆ.



