ಗಾಜಾ ಮೇಲೆ ಇಸ್ರೇಲ್‌ ಭೀಕರ ದಾಳಿ: ಹಮಾಸ್‌ ಮಿಲಿಟರಿ ಚೀಫ್ ಸಹಿತ 71 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್‌ ಉಗ್ರರು ನಡೆಸಿದ ದಾಳಿಗೆ ನಿರಂತರವಾಗಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌, ಇಂದು ಮತ್ತೆ ಗಾಜಾ ಪಟ್ಟಿಯ ಖಾನ್‌ ಯೌನಿಸ್‌ ಪ್ರದೇಶದ ಮೇಲೆ ಭೀಕರ ದಾಳಿ ನಡೆಸಿದ್ದು, ಅಕ್ಟೋಬರ್‌ 7ರ ದಾಳಿಯ ರೂವಾರಿ, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಜೊತೆಗೆ 71 ಮಂದಿ ಮೃತಪಟ್ಟಿದ್ದಾರೆ.

ಖಾನ್‌ ಯೌನಿಸ್‌ ಪ್ರದೇಶವು ಹಮಾಸ್‌ ಉಗ್ರರ ಸುರಕ್ಷಿತ ತಾಣ ಎಂದೇ ಖ್ಯಾತಿ ಪಡೆದಿದೆ. ಇದರ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದು, 71 ಮಂದಿ ಮೃತಪಟ್ಟರೆ, 289 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ನಾಗರಿಕರು ಎಂದು ಗಾಜಾ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಯೋಜನೆಯ ರೂವಾರಿ ಎನಿಸಿರುವ ಮೊಹಮ್ಮದ್‌ ಡೈಫ್‌ ಹತ್ಯೆಗಾಗಿ ಹಲವು ವರ್ಷಗಳಿಂದಲೂ ಇಸ್ರೇಲ್‌ ಗುಪ್ತಚರ ಇಲಾಖೆಯು ಪ್ಲಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ. ಖಾನ್‌ ಯೌನಿಸ್‌ ಪ್ರದೇಶದಲ್ಲಿ ಮೊಹಮ್ಮದ್‌ ಡೈಫ್‌ ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್‌ ಯೋಧರು ದಾಳಿಯ ಮೂಲಕ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್‌ ಪ್ರತಿದಾಳಿ ನಿಲ್ಲಿಸುತ್ತಿಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!