ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಇಡೀ ದೇಶಕ್ಕೆ ಒಂದು ಕಾರ್ಡ್ ಜಾರಿ ಮಾಡಿದ್ದು ನಮ್ಮ ಗೌರವ ನಮ್ಮ ಹೆಮ್ಮೆಯ ಕೆಲಸ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ವೇಳೆ ಸೇವಾ ಹಿ ಸಂಘಟನೆ ಮೂಲಕ ನಮ್ಮ ಸಂಸದರು, ಶಾಸಕರು, ಕಾರ್ಯಕರ್ತರು ಪಡಿತರ ಕಿಟ್ ವಿತರಿಸಿದೆ. ಲಕ್ಷಾಂತರ ಜನ ಕಾರ್ಮಿಕರು ಬೆಂಗಳೂರನ್ನು ತೊರೆದಿದ್ದರು. ಜನರಲ್ಲಿ ಹಾಹಾಕಾರ ಎದ್ದಿತ್ತು. ಕೊರೊನಾ ಪಾಠ ಕಲಿಸಿತು. ಆಗ ಕೇಂದ್ರ ಸರಕಾರವು ದೇಶಕ್ಕೆ ಒಂದು ಪಡಿತರ ಚೀಟಿ (ಒನ್ ನೇಶನ್ ಒನ್ ರೇಷನ್ ಕಾರ್ಡ್) ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿತು. ಇದರಿಂದ ವಲಸೆ ಕಾರ್ಮಿಕರಿಗೆ ಗರಿಷ್ಠ ಪ್ರಯೋಜನವಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಅಕ್ಕಿ, ರಾಗಿ ಬದಲಾಗಿ ವರ್ಷಕ್ಕೆ ಲಕ್ಷಾಂತರ ಕೋಟಿ ಕೇಂದ್ರ ಸರಕಾರ ಇದಕ್ಕಾಗಿ ಖರ್ಚು ಮಾಡುತ್ತಿದೆ. 2 ಲಕ್ಷ ಕೋಟಿ ಖರ್ಚು ಮಾಡಿ ಕೋವಿಡ್ ಅಡಿಯ ಗರೀಬ್ ಕಲ್ಯಾಣ್ ಯೋಜನೆ ಮುಂದುವರಿದಿದೆ. ಸಿದ್ದರಾಮಯ್ಯ ಅವರ ಫೋಟೊ ಹಾಕಿ ವಿತರಣೆ ನಡೆದಿತ್ತು. ಆದರೆ, ಶೇ 90 ಹಣವನ್ನು ಕೇಂದ್ರ ಸರಕಾರ ಖರ್ಚು ಮಾಡುತ್ತಿದೆ. ಕೇವಲ ಶೇ 10 ಖರ್ಚನ್ನು ರಾಜ್ಯ ಸರಕಾರ ಭರಿಸುತ್ತಿದೆ ಎಂದು ವಿವರಿಸಿದರು.
ಗೋಧಿಯನ್ನು ಕೆಜಿಗೆ 29 ರೂ.ಗೆ ಖರೀದಿ, 3 ರೂಪಾಯಿಗೆ ರಾಜ್ಯಕ್ಕೆ ಕೊಡಲಾಗುತ್ತಿದೆ. 22 ರೂಗೆ ಗೋಧಿ ಖರೀದಿಸಿ 20 ರೂ. ತಾನು ಭರಿಸಿ 2 ರೂಗೆ ರಾಜ್ಯಕ್ಕೆ ಕೊಡುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ ಆದ್ಯತಾ ಪಡಿತರ ಚೀಟಿ ನೀಡಿದ್ದು, ಯಾರೂ ಪಡಿತರ ಚೀಟಿಯಿಂದ ವಂಚಿತ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಇರುವ ಅಕ್ಕಿ ಕೊಡುತ್ತಿದ್ದೇವೆ (ಫಾರ್ಟಿಫೈಡ್ ರೈಸ್). ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಇದರ ಪ್ರಯೋಗ ನಡೆದಿದೆ ಎಂದರು. ಇದರಿಂದ ಆರೋಗ್ಯ ವೃದ್ಧಿ ಆಗಿದೆ ಎಂದು ವಿವರಿಸಿದರು.
ಜನರು ರೇಷನ್ ಕಾರ್ಡಿನ ಮೂಲಕ ಅಕ್ಕಿ, ರಾಗಿ ಪಡೆಯುತ್ತಿದ್ದಾರೆ. ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಕಡು ಬಡವರು, ನಿರ್ಗತಿಕರಿಗೆ ಸುಮಾರು 10.5 ಲಕ್ಷ ಕುಟುಂಬಗಳಿಗೆ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅನ್ನ ನೀಡಲಾಗುತ್ತಿದೆ. ಬಿಪಿಎಲ್ 1.17 ಕೋಟಿ, 10.5 ಲಕ್ಷ ಅಂತ್ಯೋದಯ ಅನ್ನ ಯೋಜನೆ ರೇಷನ್ ಕಾರ್ಡ್‍ಗಳಿವೆ. ಇದರಲ್ಲಿ ರಾಜ್ಯದಲ್ಲಿ 15 ಕೆಜಿ ರಾಗಿ, 20 ಕೆಜಿ ಅಕ್ಕಿ 10.5 ಲಕ್ಷ ಕುಟುಂಬಗಳಿಗೆ 4 ಕೋಟಿ ಫಲಾನುಭವಿಗಳಿಗೆ 1.17 ಕೋಟಿ ರೇಷನ್ ಕಾರ್ಡಿನ ಮೂಲಕ 2 ಕೆಜಿ ರಾಗಿ 3 ಕೆಜಿ ಅಕ್ಕಿ ವಿತರಣೆ ನಡೆದಿದೆ ಎಂದರು.
ಪಡಿತರ ಚೀಟಿ ಒಂದು ರಾಜ್ಯಕ್ಕೆ ಸೀಮಿತವಲ್ಲ. ಇದು ದೇಶವನ್ನು ಏಕತೆಯ ರೂಪದಲ್ಲಿ ಜೋಡಿಸುವ ಕೆಲಸ ಎಂದು ಅವರು ವಿಶ್ಲೇಷಣೆ ಮಾಡಿದರು.
ಹಿಂದೆ ಗ್ರೀನ್ ರೆವೊಲ್ಯೂಷನ್ ಮೂಲಕ ಗೋಧಿ ಕಡೆ ಒಲವು ಹೆಚ್ಚಿತು. ಭಾರತೀಯರ ಮೂಲ ಆಹಾರಧಾನ್ಯ ಸಿರಿಧಾನ್ಯದ (ಶ್ರೀಧಾನ್ಯ) ಮೂಲಕ ಗ್ಲುಟೋನ್ ಫ್ರೀ ಆಹಾರ ಪದ್ಧತಿ ಅಳವಡಿಸಿಕೊಳ್ಳಲು ಪ್ರಧಾನಿಯವರು ತಿಳಿಸಿದ್ದಾರೆ. ನಮ್ಮ ಪ್ರಧಾನಿಯವರ ಸಲಹೆಯಡಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಆಗಿದೆ ಎಂದು ತಿಳಿಸಿದರು. ಸಿರಿಧಾನ್ಯದಿಂದ ಆಹಾರೋತ್ಪನ್ನ ಕುರಿತು ತಿಳಿಸಿ ವಿದೇಶೀಯರಿಗೆ ಉಣಬಡಿಸಿದ್ದೇವೆ ಎಂದು ವಿವರ ನೀಡಿದರು.
ರಾಗಿ ರೊಟ್ಟಿ ಮಾಡುವವರನ್ನು ಕರ್ನಾಟಕದಿಂದ ಕರೆಸಿಕೊಂಡು ಸಂಸತ್ತಿನಲ್ಲಿ ಸಂಸದರಿಗೆ ಉಣಬಡಿಸಲಾಗಿದೆ. ನಮ್ಮ ರಾಗಿ, ಬಾಜ್ರಾ ಮತ್ತಿತರ ಸಿರಿಧಾನ್ಯ ವಿದೇಶಕ್ಕೆ ಹೋಗಬೇಕೆಂಬ ಆಶಯ ನಮ್ಮ ಪ್ರಧಾನಿ ನರೇಂದ್ರ ಮೋದಿಯವರದು ಎಂದು ತಿಳಿಸಿದರು. ದೇಶದೊಳಗಡೆ ಸಿರಿಧಾನ್ಯ ಜಾಗೃತಿ ಕಾರ್ಯವೂ ನಡೆದಿದೆ ಎಂದರು. ಸಿರಿಧಾನ್ಯ ಸಂಸ್ಕರಣೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ, ಎಸ್ ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.