ಮಳೆಹಾನಿ ಸಂತ್ರಸ್ತರಿಗೆ ಶೀಘ್ರವೇ ಹಕ್ಕುಪತ್ರ ವಿತರಣೆ: ಸಚಿವ ವಿ.ಸೋಮಣ್ಣ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ 95 ಕುಟುಂಬಗಳನ್ನು ಮಳೆಹಾನಿ ಸಂತ್ರಸ್ತರೆಂದು ಗುರುತಿಸಲಾಗಿದ್ದು, ಇವರಿಗೆ ಅಭ್ಯತ್’ಮಂಗಲ ಗ್ರಾಮದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು 8.22ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸದನದಲ್ಲಿ ಮಾಹಿತಿ ನೀಡಿದ ಸಚಿವರು,ಜಿಲ್ಲೆಯ ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು,ನಂಜರಾಯಪಟ್ಣಣ, ಗುಡ್ಡೆಹೊಸೂರು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀವರ್ಷ ನದಿ ದಡದ ಮನೆಗಳು ಕಾವೇರಿ ಪ್ರವಾಹಕ್ಕೆ ಒಳಗಾಗುತ್ತಿವೆ. ಇವರಿಗೆ ಶಾಶ್ವತ ನಿವೇಶನ, ಪುನರ್ವಸತಿ ಕಲ್ಪಿಸಲು 2019ರಲ್ಲಿ ಅಭ್ಯತ್ ಮಂಗಲ ಗ್ರಾಮದ ಸ.ನಂ.87/2ರಲ್ಲಿ 8.22ಎಕರೆ ಜಾಗವನ್ನು ಗುರುತಿಸಿ, ಆ ಜಾಗವನ್ನು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ. ಈ ಜಾಗವನ್ನು ಅಭಿವೃದ್ಧಿ ಪಡಿಸಿದ ಬಳಿಕ ಅರ್ಹ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಜಾಗಕ್ಕೆ ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳ ಖಾತೆಗೆ 4.32ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಜಾಗದಲ್ಲಿರುವ ಮರಗಳ ತೆರವು ಹಾಗೂ ಮೂಲ ಸೌಲಭ್ಯ ಕಲ್ಪಿಸಿದ ಬಳಿಕ ಸಂತ್ರಸ್ತರಿಗೆ ಹಕ್ಕು ಪತ್ರ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!