Monday, December 4, 2023

Latest Posts

ಪಠ್ಯದ ಮೂಲಕ ಭವಿಷ್ಯಕ್ಕೆ ಕರೆದೊಯ್ಯದೆ ಹಿಂದಕ್ಕೆ ಒಯ್ಯುವುದು ಮೂರ್ಖತನ: ಬಿ.ಸಿ.ನಾಗೇಶ್

ಹೊಸದಿಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಪಠ್ಯದ ಮೂಲಕ ಮಕ್ಕಳನ್ನು ಮುಂದಕ್ಕೆ ಕರೆದೊಯ್ಯದೆ ಹಿಂದಕ್ಕೆ ಕರೆದೊಯ್ಯುವುದು ಮೂರ್ಖತನ ಎಂದು ರಾಜ್ಯದ ಮಾಜಿ ಸಚಿವ ಬಿ.ಸಿ. ನಾಗೇಶ್ ಅವರು ಟೀಕಿಸಿದರು.

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವತಿಯಿಂದ ಇಂದು ಶಾಸಕರ ಭವನ ಸಂಖ್ಯೆ 1ರ, 4ನೇ ಮಹಡಿಯ ಸಭಾಂಗಣ”ದಲ್ಲಿ ಏರ್ಪಡಿಸಿದ್ದ ಪಠ್ಯಪುಸ್ತಕ ಹಾಳುಗೆಡವಿದ ರಾಜ್ಯ ಸರಕಾರದ ಕುರಿತ ಮೀಮ್ಸ್ ಬಿಡುಗಡೆ- ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಮಕ್ಕಳ ಮಾನಸಿಕ ಶಕ್ತಿ ವಿಕಸನಕ್ಕೆ ಸಂಬಂಧಿಸಿ ವಿವಿಧ ಪುಸ್ತಕಗಳನ್ನು ಹೊರತರಲಾಗಿದೆ ಎಂದರು.

511 ಪಠ್ಯಗಳನ್ನು ಬದಲಿಸಿದ ಸಮಿತಿಯಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಇರಲಿಲ್ಲ ಎಂದು ವಿವರಿಸಿದ ಅವರು, ಎಲ್ಲರೂ ಶಿಕ್ಷಣ ತಜ್ಞರಿದ್ದರು ಎಂದು ಸ್ಪಷ್ಟಪಡಿಸಿದರು. ಅದಕ್ಕೆ ಕೇಸರೀಕರಣ, ಭಾರತೀಕರಣದ ಒತ್ತು ಕೊಟ್ಟರು; ಕಾಂಗ್ರೆಸ್ಸಿನ ಮೂಲಕ ಎಂಎಲ್‍ಸಿ ಆದ ಬರಗೂರು ರಾಮಚಂದ್ರಪ್ಪನವರ ಅವಧಿಯಲ್ಲಿ ಹೊರತುಪಡಿಸಿದರೆ ರಾಜಕಾರಣಿ ಪಠ್ಯಪುಸ್ತಕ ಸಮಿತಿಯಲ್ಲಿ ಇರಲಿಲ್ಲ ಎಂದು ನುಡಿದರು.

ಬರಗೂರು ಅವರನ್ನೂ ನಾನು ರಾಜಕಾರಣಿ ಎನ್ನುವುದಿಲ್ಲ. ಆದರೆ, ಅವರು ಒಂದು ಪಕ್ಷದಿಂದ ಎಂಎಲ್‍ಸಿ ಆದವರು ಎಂದು ತಿಳಿಸಿದರು. ಪ್ರಾಥಮಿಕ ಶಿಕ್ಷಣದಲ್ಲಿ ಪಾಠ ಮಾಡಿದವರು, ಮಕ್ಕಳನ್ನು ಅರ್ಥ ಮಾಡಿಕೊಂಡವರನ್ನು ನೇಮಿಸಬೇಕಿತ್ತು ಎಂದರು.

ಬರಗೂರು ಅವರ ಪಠ್ಯಪುಸ್ತಕಗಳನ್ನು ಆಕ್ಷೇಪ ಬಂದಾಗ ಎನ್‍ಸಿಇಆರ್‍ಟಿಗೆ ಕಳಿಸಲಾಗಿತ್ತು. ಆಗ ಬಂದ ವರದಿಯಲ್ಲಿ ಇದು ಮಕ್ಕಳ ಮಟ್ಟಕ್ಕಿಲ್ಲ. ಆಗ ಎನ್‍ಇಪಿ ಬರಲಿದೆ ಎಂಬ ಕಾರಣಕ್ಕೆ ಸೋಷಿಯಲ್ ಸೈನ್ಸ್ ಮತ್ತು ಕನ್ನಡದಲ್ಲಿ ಮಾತ್ರ ಬದಲಾವಣೆ ಮಾಡಿದ್ದರು ಎಂದು ತಿಳಿಸಿದರು.
2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 511 ಪಾಠಗಳನ್ನು ಸಮಗ್ರ ಬದಲಾವಣೆಯ ಚಿಂತನೆ ನಡೆಯಿತು. ಶಿಕ್ಷಣ ಎಂದರೆ ಮುಂದೆ ಹೋಗುವಂಥದ್ದು, ಹಿಂದೆ ಬರುವಂಥದ್ದಲ್ಲ. 2023ರ ರಾಷ್ಟ್ರೀಯ ಪಠ್ಯಕ್ರಮ ನೀತಿ ಬಂದಿದೆ. 2005ರ ಶಿಫಾರಸಿನಡಿ ಮತ್ತೆ ಪಠ್ಯಕ್ರಮ ರಚಿಸುವ ಮೂರ್ಖ ಕ್ರಮ ನಡೆದಿದೆ ಎಂದು ಟೀಕಿಸಿದರು. ನಮ್ಮ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬರಗೂರು ಅವರ ಕಮಿಟಿಗೆ ಸುಮಾರು 2.5 ಕೋಟಿಯಷ್ಟು ಖರ್ಚಾಗಿತ್ತು. ಅದೇ ಶಿಫಾರಸನ್ನು ತರುವುದಾದರೆ ಮತ್ತೆ ಇನ್ನಷ್ಟು ಖರ್ಚು ಬೇಕೇ ಎಂದೂ ಅವರು ಕೇಳಿದರು. ಶಿಕ್ಷಣ ಎಂದರೆ ನಿಂತ ನೀರಲ್ಲ; ಮುಂದೆ ಹರಿಯುವಂಥದ್ದು. ಶಿಕ್ಷಣ ಎನ್ನುವುದು ಆಯಾ ಕಾಲಕ್ಕೆ ತಕ್ಕಂತೆ ಇರಬೇಕು ಎಂದು ತಿಳಿಸಿದರು.

ಒಂದೆಡೆ ರಾಮಲಿಂಗಾರೆಡ್ಡಿ, ಇನ್ನೊಂದೆಡೆ ಶಿವಕುಮಾರ್, ಮತ್ತೊಂದು ಕಡೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಮಕ್ಕಳಿಗೆ ಏನು ಬೇಕು ಎಂಬ ಪ್ರಶ್ನೆಯೇ ಇಲ್ಲ. ಕನ್ನಡದ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನಿತಿ (ಎಸ್‍ಇಪಿ) ಬರಲಿದೆ. ಇವರು ನಡೆಸುವ ಶಾಲೆಗಳಲ್ಲಿ ಎಸ್‍ಇಪಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದೇಶದ, ರಾಜ್ಯದ ಭವಿಷ್ಯವನ್ನು ನಿರ್ಧರಿಸುವುದು ಶಿಕ್ಷಣ ಇಲಾಖೆ. ನಮ್ಮ ಬಡ ಮಕ್ಕಳ ಭವಿಷ್ಯ ನಿರ್ಧರಿಸುವ ಇಲಾಖೆ ಇದು. ಯಾರೋ ಕೇಳಿದರು; ಯಾರೋ ಹೇಳಿದರೆಂದು, ಪ್ರಣಾಳಿಕೆ ವೇಳೆ ತಿಳಿಸಿದೆ ಎಂಬ ಕಾರಣಕ್ಕೆ ಪಠ್ಯದಲ್ಲಿ ಬದಲಾವಣೆ ಮಾಡಬಾರದು ಎಂದು ತಿಳಿಸಿದರು. ಪಠ್ಯ ಬದಲಾವಣೆ ಎಂಬುದು ಹುಡುಗಾಟದ ವಿಚಾರ ಆಗದಿರಲಿ ಎಂದು ಎಚ್ಚರಿಸಿದರು.

ಡಾ. ರಾಮಚಂದ್ರ ಶೆಟ್ಟಿ ಅವರು ಮಾತನಾಡಿ, ಸುಮಾರು 3 ಸಾವಿರ ಜನ ಶಿಕ್ಷಣ ತಜ್ಞರು ಸೇರಿ ಶಿಕ್ಷಣಕ್ಕೆ ಸಂಬಂಧಿಸಿ ತಯಾರಿಸಿದ 511 ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರಲು ಯತ್ನಿಸುವುದು ಖಂಡನೀಯ ಎಂದರು. ಶಿಕ್ಷಣವು ಶಿಕ್ಷಣ ತಜ್ಞರ ವಿಚಕ್ಷಣ ಜ್ಞಾನಕ್ಕೆ ಸಂಬಂಧಿಸಿದೆಯೇ ಹೊರತು ಅದು ರಾಜಕಾರಣಿಗಳ ವಿಚಕ್ಷಣ ಜ್ಞಾನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.

5-6 ತರಗತಿಯ ಮಕ್ಕಳಿಗೆ ಜಾತಿವಾದದ, ಜಾತಿ ವಿಭಜನೆಯ ಬೀಜ ಬಿತ್ತುವ ಅವಶ್ಯಕತೆ ಇರುವ ಪಠ್ಯ ತರುವ ಹುನ್ನಾರ ನಡೆದಿದೆ. ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಹುನ್ನಾರ ನಡೆದಿದೆ ಎಂದು ಟೀಕಿಸಿದರು. ವೈರುಧ್ಯಗಳನ್ನು ಮೀಮ್ಸ್ ಮೂಲಕ ಸಮಾಜಕ್ಕೆ ಅರ್ಪಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ವಿಧಾಪರಿಷತ್ ಸದಸ್ಯರಾದ ಅ. ದೇವೇಗೌಡ, ಚಿದಾನಂದ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!