ಹೊಸದಿಗಂತ ವರದಿ,ಮಂಡ್ಯ :
ಸಮಾಜದ ಕ್ಷುದ್ರ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ದೈರ್ಯವನ್ನು ಹಿಂದೂ ಸಮಾಜ ತೋರಲೇಬೇಕಾದ ಅನಿವಾರ‌್ಯತೆ ಇದೆ ಎಂದು ಮೈಸೂರು ವಿಭಾಗ ಕಾರ್ಯವಾಹ ಮಹೇಶ್ ಪ್ರತಿಪಾದಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ನಡೆದ ಪಥಸಂಚಲನ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊರಗಿನ ಮತ್ತು ಒಳಗಿನ ವಿಚ್ಛಿದ್ರಕಾರಿ ಶಕ್ತಿಗಳು ಭಾರತವನ್ನು ಛಿದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದು, ಅದನ್ನು ವಿಫಲಗೊಳಿಸುವ ತಂತ್ರವನ್ನು ಮಾಡಬೇಕಿದೆ ಎಂದು ಹೇಳಿದರು.
ಮಣಿಪುರದ ಉದ್ವಿಗ್ನತೆಗೆ ಒಳಗಿನ ಶತೃಗಳಷ್ಟೇ ಕಾರಣವಲ್ಲ, ಹೊರಗಿನ ವಿದೇಶಿ ಶತೃಗಳ ಕೈವಾಡ ಬಲವಾಗಿದೆ ಎಂಬುದು ಈಗಾಗಲೇ ತಿಳಿದಿದ್ದು, ಅಲ್ಲಿ ಸಹೋದರರಂತೆ ಬದುಕುತ್ತಿದ್ದ ಎರಡು ಬಡ ಕುಟುಂಬಗಳು ಇದ್ದಕ್ಕಿದ್ದಂತೆ ಸಂಘರ್ಷಕ್ಕಿಳಿಯಲು ಯಾವುದೇ ಕಾರಣವೂ ಇರಲಿಲ್ಲ. ಆದರೆ ಕೆಲ ಕ್ಷುದ್ರ ಶಕ್ತಿಗಳ ಕೈವಾಡದಿಂದಾಗಿ ಈ ಘಟನೆ ನಡೆದುಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆ ಮೂಲಕ ಸಮಸ್ಥ ಭಾರತವನ್ನು ಮತ್ತು ಹಿಂದೂ ಸಮಾಜವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹತ್ತರ ಉದ್ದೇಶವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಂದಿದೆ. ಸಮಾಜದ ಅನಿಷ್ಟ ಪದ್ಧತಿಗೆ ಎಳ್ಳು ನೀರು ಬಿಡುತ್ತಾ, ಎಲ್ಲರಲ್ಲಿ ಒಂದಾಗುವ ಮನಸ್ಥಿತಿಯನ್ನು ನಿರ್ಮಿಸುವುದು ಸಂಘದ ಧ್ಯೇಯವಾಗಿದೆ ಎಂದು ಹೇಳಿದರು.