ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕ್ರಿಶ್ಚಿಯನ್ ಉಪಪಂಗಡ ಎಂದೇ ಕರೆಸಿಕೊಳ್ಳುವ ಯಹೋವನ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಐಇಡಿ ಬಾಂಬ್ ಬ್ಲಾಸ್ಟ್ ಆಗಿದೆ. ಈ ಸ್ಫೋಟದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.
ಇದರ ಬೆನ್ನಲ್ಲೇ ಶಂಕಿತ ವ್ಯಕ್ತಿಯೊಬ್ಬ ತಾನೇ ಬಾಂಬ್ ಸ್ಪೋಟಿಸಿರುವುದಾಗಿ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ. ಈ ಶಂಕಿತ ವ್ಯಕ್ತಿಯ ಹೆಸರು ಡೋಮ್ನಿಕ್ ಮಾರ್ಟಿನ್.
ಸ್ಫೋಟದ ನಂತರ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಲೈವ್‌ಗೆ ಬಂದ ಡೊಮಿನಿಕ್ ಮಾರ್ಟಿನ್ ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ತ್ರಿಶೂರ್ ಜಿಲ್ಲೆಯ ಕೊಡಕರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕೊಚ್ಚು ಪೊಲೀಸ್ ಕ್ಯಾಂಪ್‌ನಲ್ಲಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ.
ಶಂಕಿತ ವ್ಯಕ್ತಿ ಯಾವುದೇ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಕುರಿತು ತನಿಖೆ ನಡೆಯುತ್ತಿದೆ. ಡೊಮ್ನಿಕ್ ಮಾರ್ಟಿನ್ ಕೊಚ್ಚಿ ಮೂಲದವನಾಗಿದ್ದು, ತನಿಖೆ ತೀವ್ರಗೊಂಡಿದೆ. ಶಂಕಿತ ವ್ಯಕ್ತಿ ಶರಣವಾಗಿರುವ ಕುರಿತು ಕೇರಳ ಎಡಿಜಿಪಿ ಅಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ದಿಕ್ಕು ತಪ್ಪಿಸಲು ಇದೀಗ ಉಗ್ರರು ತಿರುವು ನೀಡಲು ಯತ್ನಿಸುತ್ತಿರುವ ಕುರಿತು ಕೇಂದ್ರ ತನಿಖಾ ತಂಡಗಳು ಅನುಮಾನ ವ್ಯಕ್ತಪಡಿಸಿದೆ. ಇತ್ತ ವ್ಯಕ್ತಿಯೊಬ್ಬನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಈಗ ಪೊಲೀಸರಿಗೆ ಶರಣಾಗಿರುವ ಡೊಮಿನಿಕ್ ಮಾರ್ಟಿನ್ ತನ್ನ ಹೇಳಿಕೆಯನ್ನು ಬೆಂಬಲಿಸುವ ಸಾಕ್ಷ್ಯ ನೀಡಿದ್ದಾನೆ. ನಾವು ಪ್ರಸ್ತುತ ಅದನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ, ಈ ಕೃತ್ಯವನ್ನು ನಡೆಸಲು ನೀಡಿದ ಕಾರಣಗಳನ್ನು ಸಹ ಪರಿಶೀಲಿಸುತ್ತಿದ್ದೇವೆ ಎಂದು ಎಡಿಜಿಪಿ ಹೇಳಿದ್ದಾರೆ.