ಹೊಸದಿಗಂತ ವರದಿ ಆಲೂರು :
ಬಾಲ್ಯ ವಿವಾಹ ಪದ್ದತಿಯು ಸಮಾಜಕ್ಕೆ ಅಂಟಿದ ಪಿಡುಗು ಇಂತಹ ಪಿಡುಗು ಬೇರು ಸಮೇತ ನಿರ್ಮೂಲನೆ ಮಾಡಬೇಕಾದರೆ ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸಮಿತಿ ಸದಸ್ಯ ಕಾರ್ಯದರ್ಶಿ ನಿರ್ಮಲ ಎಂ.ಸಿ. ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಆಲೂರು,ವಕೀಲರ ಸಂಘ ಆಲೂರು, ಮಹಿಳಾ ಮತ್ತು ಮಕ್ಕಳ ಇಲಾಖೆ ಆಲೂರು,ತಾಲ್ಲೂಕು ಪಂಚಾಯಿತಿ, ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮಕ್ಕ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಹೆಣ್ಣುಮಕ್ಕಳಿಗೆ 18 ಗಂಡುಮಕ್ಕಳಿಗೆ 21 ವರ್ಷದೊಳಗೆ ಮದುವೆ ಮಾಡಿದರೇ ಅದು ಶಿಕ್ಷರ್ಹಾ ಅಪರಾದವಾಗಿದ್ದು , ಪ್ರತಿ ಹಳ್ಳಿ ಹಳ್ಳಿನಲ್ಲಿಯೂ ಬಾಲ್ಯ ವಿವಾಹ ನಿಷೇಧದ ಕುರಿತು ಜಾಗೃತಿ ಮೂಡಿಸುತ್ತಿರುವುದು ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಹಾಗೂ ಬಾಲ್ಯ ವಿವಾಹ ನಡೆಯುವ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಅಥವಾ ಹತ್ತಿರದ ಪೋಲಿಸ್ ಠಾಣೆಗೆ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೇರವಾಗಿ ಬಂದು ಮಾಹಿತಿ ನೀಡಿದಲ್ಲಿ ತಕ್ಷಣ ಕಾನೂನು ರಿತ್ಯ ಕ್ರಮ ತೆಗದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಾಯಕ ನಿರ್ದೇಶಕ ಎ.ಟಿ. ಮಲ್ಲೇಶ್ ಮಾತನಾಡಿದರು.
ಹಿರಿಯ ವಕೀಲ ಹೊನ್ನವಳ್ಳಿ ನಾಗರಾಜ್ ಮಾತನಾಡಿ, ಬಾಲ್ಯವಿವಾಹದಿಂದ ಬಹಳಷ್ಟು ದುಷ್ಪರಿಣಾಮಗಳಿದ್ದು, ಅದನ್ನು ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಿಸುವ ಮೂಲಕ ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದರು.
ತಾಲ್ಲೂಕು ಪಂಚಾಯಿತಿ ಪ್ರಬಾರಿ ಕಾರ್ಯನಿರ್ವಹಣಾಧಿಕಾರಿ ದಯಾನಂದ್,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್,ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಂದ್ರ, ಹಿರಿಯ ವಕೀಲರಾದ ಆರ್.ಬಿ.ಸುರೇಶ್, ಕೆ.ಜಿ.ನಾಗರಾಜ್ , ಸಚಿನ್, ರಶ್ಮಿ , ಹಾಗೂ ಅಂಗನವಾಡಿ ಸಿಬ್ಬಂದಿಗಳು ಉಪಸ್ಥಿತರಿದ್ದರು.