ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದು, ಶೀಘ್ರವೇ ಪ್ರಸ್ತಾವನೆ ಪರಿಗಣಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಇದು ಒಕ್ಕೂಟ ವ್ಯವಸ್ಥೆ, ಇಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ರಾಜ್ಯಗಳು ಜನರ ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟಿರುತ್ತದೆ. ಸಮಯಕ್ಕೆ ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದಿದ್ದಾರೆ.
ರಾಜ್ಯ 17901 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ, ಕೇಂದ್ರದಿಂದ ಸಮೀಕ್ಷೆ ನಡೆಸಲು ತಂಡವೂ ಬಂದು ಹೋಗಿದೆ. ಆದರೂ ಯಾವುದೇ ಪರಿಹಾರ ಬಿಡುಗಡೆ ಆಗಿಲ್ಲ. ಜನರಿಗೆ ಸರ್ಕಾರದ ಅವಶ್ಯಕತೆ ಇದೆ, ಈ ಸಂದರ್ಭದಲ್ಲಿ ಬೇರೆ ಯಾವ ಪಕ್ಷದವರೂ ರಾಜಕೀಯ ಮಾಡಬಾರದು. ಎಲ್ಲರೂ ಕೇಂದ್ರದ ಮೇಲೆ ಒತ್ತಡ ಹೇರಿ ಪರಿಹಾರ ಶೀಘ್ರವೇ ನೀಡುವಂತೆ ಮಾಡಬೇಕು ಎಂದಿದ್ದಾರೆ.