ಕೊಡಗನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಹಲವರ ಪಣ

ಹೊಸದಿಗಂತ ವರದಿ ಮಡಿಕೇರಿ:

ಕೋಮು ಭಾವನೆಗಳ ಪ್ರಚೋದನೆಯ ಮೂಲಕ ಸಮಾಜವನ್ನು ವಿಭಜಿಸಿ, ಕೇವಲ ಮತ ರಾಜಕಾರಣಕ್ಕೆ ಸೀಮಿತವಾಗಿ ರಾಜಕೀಯ ಪಕ್ಷಗಳು ಕಾರ್ಯಾಚರಿಸುತ್ತಿದ್ದು, ಇವುಗಳನ್ನು ಮೀರಿ ಜಾತಿ ಧರ್ಮಗಳ ಎಲ್ಲೆಯನ್ನು ದಾಟಿ ಕೊಡಗಿನಲ್ಲಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವುದು ಅತ್ಯವಶ್ಯವೆನ್ನುವ ಅನಿಸಿಕೆಗಳು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಗಣ್ಯರಿಂದ ವ್ಯಕ್ತಗೊಂಡಿತು.
ಕೊಡಗನ್ನು ಇಲ್ಲಿನ ಪ್ರಕೃತಿ, ಸಂಸ್ಕೃತಿ ಮತ್ತು ಸಹೃದಯತೆಯ ಭಾವನೆಗಳೊಂದಿಗೆ ಮತ್ತೆ ಕಟ್ಟಬೇಕೆನ್ನುವ ಚಿಂತನೆಗಳಡಿ ರೂಪುಗೊಂಡಿರುವ ‘ಕೊಡಗು ಬಚಾವೋ ವೇದಿಕೆ’ಯ ಮೊದಲ ಸಭೆ ಇಲ್ಲಿನ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಂಕೇತ್ ಪೂವಯ್ಯ, ಜಾತ್ಯತೀತ ಚಿಂತನೆಯ ಮಂದಿಯನ್ನು ಒಗ್ಗೂಡಿಸಿ ಕೋಮುವಾದದ ವಿರುದ್ಧ ಜಿಲ್ಲೆಯಲ್ಲಿ ಹೋರಾಟವನ್ನು ರೂಪಿಸಬೇಕು. ಆ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟಬೇಕೆನ್ನುವ ಆಶಯಕ್ಕೆ ಪೂರಕವಾಗಿ ನಿರಂತರವಾಗಿ ವೇದಿಕೆ ಮೂಲಕ ಕಾರ್ಯನಿರ್ವಹಿಸುವುದಾಗಿ ಘೋಷಿಸಿದರು. ರಾಜಕೀಯ ಪಕ್ಷಗಳು ರಾಜಕಾರಣದಲ್ಲಿ ಧರ್ಮ ಮತ್ತು ಜಾತಿಯ ವಿಚಾರಗಳನ್ನು ಬೆರೆಸುವ ಮೂಲಕ ‘ಪ್ರಜಾತಂತ್ರ’ ವ್ಯವಸ್ಥೆಗೆ ಬೆಲೆ ಇಲ್ಲದಂತೆ ಮಾಡಿರುವುದಾಗಿ ವಿಷಾದ ವ್ಯಕ್ತಪಡಿಸಿದರು.

ಸೆ.13ರಂದು ಸಮಾವೇಶ:

ಕೊಡಗು ಬಚಾವೋ ವೇದಿಕೆ ವತಿಯಿಂದ ಸೆ.13 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಇದಕ್ಕೆ ಹಿರಿಯ ಚಿಂತಕರನ್ನು ಆಹ್ವಾನಿಸಲಿದ್ದೇವೆಂದು ಮಾಹಿತಿ ನೀಡಿದರು.

ಬಸವ ತತ್ತ್ವದಿಂದ ಶಾಂತಿಯ ಸಮಾಜ:

ವೇದಿಕೆಯ ಪ್ರಮುಖರಾದ ಪಾಣತ್ತಲೆ ವಿಶ್ವನಾಥ್ ಅವರು ಮಾತನಾಡಿ, ಕೋಮು ಭಾವನೆಗಳಿಂದ ಪ್ರಚೋದಿತವಾದ ಕೊಡಗನ್ನು ರಕ್ಷಿಸುವ, ಶಾಂತಿಯ ನಾಡನ್ನಾಗಿ ಮತ್ತೆ ಕಾಣಬೇಕೆನ್ನುವ ಹಂಬಲ ತಮ್ಮದು. ಇಂತಹ ಅಶಾಂತಿಯ ವಾತಾವರಣದಿಂದ ಹೊರ ಬರಲು ಬಸವಣ್ಣನ ಸಮಾನತೆಯ ತತ್ತ್ವಾದರ್ಶಗಳು ಅತ್ಯಂತ ಸಹಕಾರಿಯಾಗಿದೆಯೆಂದು ಅಭಿಪ್ರಾಯಿಸಿದರಲ್ಲದೆ, ಈ ದೇಶದಲ್ಲಿರುವ ಶೇ.67 ರಷ್ಟು ಶೋಷಿತ, ಹಿಂದುಳಿದ ಸಮೂಹದ ಒಗ್ಗಟ್ಟನ್ನು ಛಿದ್ರ ಮಾಡಿದ ಕೆಲವೇ ಮಂದಿ ಇಂದು ಅಧಿಕಾರದಲ್ಲಿದ್ದಾರೆ. ಈ ಸತ್ಯವನ್ನು ಜನರಿಗೆ ತಿಳಿಹೇಳುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆಯೆಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!