ಅಜ್ಜನ ಮೂತಿ ನೋಡಿದ್ರೆ ಯಾರೊಬ್ಬರಿಗೂ ನಗು ಬರುತ್ತಿರಲಿಲ್ಲ. ಯಾವಾಗಲೂ ಮೂತಿ ಊದಿಸಿಕೊಂಡೇ ಕುಳಿತಿರುತ್ತಿದ್ದ. ಪುಟ್ಟ ಹಳ್ಳಿಯಾದ ಕಾರಣ ಎಲ್ಲರಿಗೂ ಈ ಅಜ್ಜನ ಪರಿಚಯ ಇತ್ತು. ಅಜ್ಜ ಉರುಕ, ಯಾವಾಗಲೂ ಗಂಟುಮುಖ ಎಂದು ಜನ ಮಾತನಾಡುತ್ತಿದ್ದರು.
ಅಜ್ಜನ ಮನೆಯಲ್ಲಿ ಇದ್ದವರೂ ಅವರ ಬಗ್ಗೆ ಆಸೆ ಬಿಟ್ಟಿದ್ದರು. ಈ ಮನುಷ್ಯನಿಗೆ ನಗು ಬರೋದು ಯಾವಾಗ? ಖುಷಿಯಾಗಿರೋದು ಯಾವಾಗ ಎಂದು ಕಾಯುತ್ತಿದ್ದರು. ಆದರೆ ಅಜ್ಜ ಮಾತ್ರ ಖುಷಿಯಾಗಿರಲಿಲ್ಲ.
ಹೀಗೆ ವರ್ಷಗಳೇ ಉರುಳಿತ್ತು. ಒಂದು ದಿನ ಅಜ್ಜ ಇದ್ದಕ್ಕಿದ್ದಂತೆಯೇ ನಗಲು ಆರಂಭಿಸಿದ. ಊರಲ್ಲಿ ಇದ್ದವರನ್ನೆಲ್ಲಾ ತಾನೇ ನಗುತ್ತಾ ಊಟ ಆಯ್ತಾ, ತಿಂಡಿ ಆಯ್ತಾ ಕೇಳೋಕೆ ಶುರು ಮಾಡಿದ. ಜನರಿಗೆ ಆಶ್ಚರ್ಯ ಅಜ್ಜನಿಗೇನಾಯ್ತು, ಇಷ್ಟು ದಿನ ಚೆನ್ನಾಗಿಯೇ ಇದ್ರಲ್ಲಾ?
ಅಜ್ಜನ ಮನೆಯ ಬಳಿ ಬಂದು ಕೇಳಿದರು, ಏನಾಯ್ತು ನಿಮಗೆ ಯಾಕಿಷ್ಟು ಖುಷಿ? ಅಜ್ಜ ಹೇಳಿದರು. ಇಷ್ಟು ವರ್ಷ ಖುಷಿಯ ಹುಡುಕಾಟದಲ್ಲಿ ಇದ್ದೆ. ಆದರೆ ಇಂದು ಈ ಹುಡುಕಾಟ ನಿಲ್ಲಿಸಿದ್ದೇನೆ. ದಿನ ಹೇಗಿದೆಯೋ ಹಾಗೆ ಕಳಿಯೋಕೆ ಆರಂಭಿಸಿದ್ದೇನೆ. ಸಂತೋಷ ನನ್ನ ಬಳಿ ತಾನಾಗೆಯೇ ಬಂದಿದೆ ಎಂದರು.
ಸಂತೋಷ, ಸುಖ, ನೆಮ್ಮದಿಯನ್ನು ಹುಡುಕುತ್ತಾ ಎಲ್ಲೆಲ್ಲಿಗೆ ತಲುಪಿದ್ದೀವೋ? ಆದರೆ ಇದೆಲ್ಲವೂ ಇರುವುದು ನಮ್ಮೊಳಗೆ ಎನ್ನುವುದನ್ನ ಮರೆತುಹೋಗಿದ್ದೇವೆ ಅಲ್ವಾ?