ಅದು ತಾಯಿ ಕೊಟ್ಟಿದ್ದ ಹುಲಿ ಉಗುರಿನ ಪೆಂಡೆಂಟ್: ಮೌನ ಮುರಿದ ಜಗ್ಗೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹುಲಿ ಉಗುರು ಪ್ರಕರಣ ಸಂಬಂಧ ಬಿಗ್​ಬಾಸ್ ಸ್ಪರ್ಧಿಯಾಗಿ ಬಂದಿದ್ದ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಅದಾದ ಬಳಿಕ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಸೆಲೆಬ್ರಿಟಿಗಳ ಮನೆಗಳ ಮೇಲೆಲ್ಲ ದಾಳಿ ಮಾಡಲಾಯ್ತು.

ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಇನ್ನೂ ಹಲವು ಸೆಲೆಬ್ರಿಟಿಗಳ ಹೆಸರು ಪ್ರಕರಣದಲ್ಲಿ ಕೇಳಿ ಬಂತು. ಜಗ್ಗೇಶ್ ಅವರು ತಾವು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ತಮ್ಮ ತಾಯಿ ತಮಗಾಗಿ ಕೊಟ್ಟಿದ್ದೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಹಳೆಯ ವಿಡಿಯೋ ವೈರಲ್ ಆಗಿತ್ತು. ಆ ಪ್ರಕರಣದ ಬಗ್ಗೆ ಜಗ್ಗೇಶ್ ಇತ್ತೀಚೆಗೆ ವೇದಿಕೆಯಲ್ಲಿ ತಮ್ಮದೇ ಶೈಲಿಯಲ್ಲಿ ಮಾತನಾಡಿದರು.

‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ತಮ್ಮದೇ ಬಿಡು-ಬೀಸು ಶೈಲಿಯಲ್ಲಿ ಮಾತನಾಡಿದ ಜಗ್ಗೇಶ್, ‘ನಮ್ಮ ಅಮ್ಮ ಒಂದು ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು, ನನ್ನ 40 ವರ್ಷದ ಸಿನಿಮಾ ಜರ್ನಿಯ ಸಂದರ್ಶನದಲ್ಲಿ ನಮ್ಮ ತಾಯಿ ಕೊಟ್ಟಿದ್ದ ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಹೆಮ್ಮೆಯಿಂದ ಹೇಳಿದ್ದೆ. ಅವನ್ಯಾರೋ ಕಿತ್ತೋದ್ ನನ್ಮಗ ರಿಯಲ್ ಆಗಿರೋದನ್ನು ಹಾಕ್ಕೊಂಡು ತಗಲಾಕ್ಕೊಂಡ್ ಬಿಟ್ಟ. ಅದಾಗಿದ್ದೆ ತಡ ಎಲ್ಲ ಚಾನೆಲ್, ಯೂಟ್ಯೂಬ್ ಚಾನೆಲ್​ನವರು ನಮ್ಮ ಮನೆ ಮುಂದೆ ಬಂದು ನಿಂತರು. ಸುದ್ದಿಗಳಲ್ಲಿ ಏನೇನೋ ಡೈಲಾಗ್​ಗಳನ್ನು ಬಿಟ್ಟರು’ ಎಂದು ತಮಾಷೆಯಾಗಿಯೇ ಬೇಸರ ಹೇಳಿಕೊಂಡರು.

‘ನಾನು ಮಾತೃಪ್ರೇಮಿ, ಹಾಗಾಗಿ ನಮ್ಮಮ್ಮ ಕೊಟ್ಟ ಉಡುಗೊರೆ ಬಗ್ಗೆ ಪ್ರೀತಿಯಿಂದ ಹೇಳಿಕೊಂಡೆ. ಆದರೆ ಅದನ್ನೆಲ್ಲ ಧರಿಸಬಾರದು ಎಂಬ ಕಾನೂನು ಇದೆಯಂತೆ. ಅದರ ಬಗ್ಗೆ ಯಾರಿಗೂ ಜಾಗೃತಿ ಇರಲಿಲ್ಲ. ಧರಿಸುವುದು ಸಹಜ ಎಂಬಂತೆ ನಾನೂ ಧರಿಸಿದ್ದೆ. ಆತ ಸಿಕ್ಕಿ ಹಾಕಿಕೊಂಡ ಮೇಲೆ, ನನ್ನ ಹಳೆಯ ವಿಡಿಯೋ ವೈರಲ್ ಮಾಡಿದರು. ಪಾಪ ಜನರಿಗೇನು ಗೊತ್ತು, ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನ ಎಂದು ಪ್ರಶ್ನೆ ಮಾಡಿದರು. ಯಾವುದೋ ಕೆಲವು ವ್ಯೀವ್ಸ್​ಗಳಿಗಾಗಿ ಎಂಥೆಂಥವರೋ ಏನೇನೋ ಮಾತನಾಡಿದರು’ ಎಂದು ಬೇಸರದಿಂದ ನುಡಿದರು.

‘ಕೆಲವು ಅಧಿಕಾರಿಗಳು ಮನೆಗೆ ಬಂದರು, ಅವರ ಕರ್ತವ್ಯ ಅವರು ಮಾಡಿದರು. ಅಂದು ನಾನು ಮನೆಯಲ್ಲಿರಲಿಲ್ಲ, ಆ ಪೆಂಡೆಂಟ್ ಅನ್ನು ಕೊಟ್ಟುಬಿಡುವಂತೆ ನಾನು ಪತ್ನಿಗೆ ಹೇಳಿದ್ದೆ, ಹಾಗೆಯೇ ಅಧಿಕಾರಿಗಳಿಗೆ ಅದನ್ನು ಕೊಡಲಾಯ್ತು, ಅದನ್ನು ಡಸ್ಟ್​ಬಿನ್​ನಲ್ಲಿ ಎಸೆದರು. ನನ್ನ ತಾಯಿ ಪ್ರೀತಿಯಿಂದ ಕೊಟ್ಟಿದ್ದರು, ಅದು ನನ್ನಿಂದ ದೂರವಾಯ್ತು. ವಸ್ತು ಹೋದರೆ ಏನಂತೆ ನನ್ನ ತಾಯಿ ನನ್ನ ಹೃದಯದಲ್ಲಿ ಇದ್ದಾರೆ. ಈ ದೇಹವನ್ನೇ ಅವರು ನೀಡಿದ್ದಾರೆ’ ಎಂದರು.

ಪ್ರಕರಣದ ಬಗ್ಗೆ ಚರ್ಚೆ ಹೆಚ್ಚಾದಾಗ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಹೋಗಿ ಸ್ಟೇ ತರಬೇಕಾಯ್ತು. ಅದಾದ ಬಳಿಕ ನನ್ನ ಆತ್ಮೀಯ ಗೆಳೆಯರೂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಇಂಥಹಾ ಕಾನೂನಿನಂದ ಸಮಸ್ಯೆ ಆಗುತ್ತಿದೆ ನಿಮ್ಮ ನೆರವು ಬೇಕು ಎಂದು ಕೇಳಿಕೊಂಡೆ. ಕೂಡಲೇ ಅವರು ಹೇಳಬೇಕಾದವರಿಗೆ ಹೇಳಿ ಆ ಘಟನೆ ಬಗ್ಗೆ ಜಾಗೃತಿ ಮೂಡಿಸಿ, ಆ ಪ್ರಕರಣದ ಜೋರು ಕಡಿಮೆ ಆಗುವಂತೆ ಮಾಡಿದರು. ಆದರೆ ನನಗೆ ಬೇಸರವಾಗಿದ್ದೆಂದರೆ, ನಾನು ನಾಲ್ಕು ದಶಕದಿಂದಲೂ ಚಿತ್ರರಂಗದಲ್ಲಿದ್ದೇನೆ, ಮಾಧ್ಯಮದವರೊಟ್ಟಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೀನಿ, ನನ್ನ ತಪ್ಪು ಕಂಡಾಗ ಎಚ್ಚರಿಸಬೇಕಿತ್ತು, ಅದರ ಬದಲಿಗೆ ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ’ ಎಂದು ಬೇಸರ ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!