ಕಲಾಂರನ್ನು ವಿಮಾನ ವಿಜ್ಞಾನದೆಡೆ ಸಾಗುವಂತೆ ಮಾಡಿದ ಶಿಕ್ಷಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಇಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆ. ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಡಾ.ಸರ್ವಪಲ್ಲೀ ರಾಧಾಕೃಷ್ಣನ್‌ ಅವರ ನೆನಪಿನಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇಂದಿನ ಆಧುನಿಕ ದಿನಮಾನದಲ್ಲಿಅಂಬೆಗಾಲಿಟ್ಟು ನಡೆಯಲು ಪ್ರಾರಂಭಿಸುತ್ತಿಂದಂತೆ ಮಗುವಿನ ಔಪಚಾರಿಕ ಶಿಕ್ಷಣವು ಪ್ರಾರಂಭವಾಗುತ್ತದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ, ಸ್ನಾತಕೋತ್ತರ ಹೀಗೆ ಪ್ರತಿಯೊಂದು ಹಂತದಲ್ಲಿಯೂ ತಮ್ಮ ಜ್ಞಾನಧಾರೆಯನ್ನು ಎರಕಹೊಯ್ದು ಶಿಕ್ಷಕನಾದವನು ವಿದ್ಯಾರ್ಥಿಯೊಬ್ಬನ ಜೀವನವನ್ನು ರೂಪಿಸುತ್ತಾನೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಶಿಕ್ಷಕರಾದವರ ಸ್ಥಾನ ಬಹು ಮಹತ್ವವುಳ್ಳದ್ದು. ಇಂಥಹ ಶಿಕ್ಷಕರನ್ನು ಸ್ಮರಿಸುವ ದಿನವಾದ ಇಂದು ಭಾರತದ ಮಾಜಿ ರಾಷ್ಟ್ರಪತಿಗಳಾದ, ಕ್ಷಿಪಣಿ ಪಿತಾಮಹ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರು ತಮ್ಮ ಜೀವನಕ್ಕೆ ತಿರುವುಕೊಟ್ಟ ಶಿಕ್ಷಕರನ್ನು ನೆನೆಸಿಕೊಂಡಿರುವುದರ ಸಾರ ಸಂಗ್ರಹ ಇಲ್ಲಿದೆ.

ಕಲಾಂರವರು ಶಿಕ್ಷಕರ ಬಗ್ಗೆ ಮಾತನಾಡುವಾಗ ತಮಗೆ 5ನೇ ತರಗತಿಯಲ್ಲಿ ಕಲಿಸಿದ ಶಿಕ್ಷಕರೊಬ್ಬರನ್ನು ನೆನಪಿಸಿಕೊಳ್ಳುತ್ತಾರೆ. ಅಂದು ಆ ಶಿಕ್ಷಕರು ನೀಡಿದ ಪ್ರೇರಣೆಯಿಂದಲೇ ಅವರು ವಿಮಾನಶಾಸ್ತ್ರದ ಬಗ್ಗೆ ಓದಲು, ವಿಜ್ಞಾನಿಯಾಗಲು ಸ್ಫೂರ್ತಿತುಂಬಿತು ಎಂದು ವಿವರಿಸುತ್ತಾರೆ. ಈ ಕಥೆ ಕಲಾಂರವರು ತಮ್ಮ 10ನೇ ವಯಸ್ಸಿನಲ್ಲಿರುವಾಗ ನಡೆದಿರುವುದು.

ಶ್ರೀ ಶಿವಸುಬ್ರಮಣ್ಯ ಅಯ್ಯರ್‌ ಎಂಬ ಉತ್ತಮ ಶಿಕ್ಷಕರೊಬ್ಬರು ಕಲಾಂರವರಿದ್ದ ತರಗತಿಗೆ ಪಾಠಮಾಡುತ್ತಿದ್ದರು. ಒಮ್ಮೆ ಹೀಗೆ ಅವರು ಪಾಠ ಮಾಡುತ್ತ ಮಾಡುತ್ತ ಪಕ್ಷಿಗಳ ಹಾರಾಟದ ಬಗ್ಗೆ ಕಲಿಸುತ್ತಿದ್ದರು. ಕಪ್ಪುಹಲಗೆಯ ಮೇಲೆ ಪಕ್ಷಿಯೊಂದರ ರೇಖಾ ಚಿತ್ರವನ್ನು ಚಿತ್ರಿಸಿ ಅವು ಹೇಗೆ ಹಾರುತ್ತವೆ , ಹಾರುವಾಗ ಹೇಗೆ ದಿಕ್ಕು ಬದಲಾಯಿಸುತ್ತವೆ ಎಂಬೆಲ್ಲ ವಿಷಯಗಳ ಕುರಿತಾಗಿ ವಿವರಿಸಿದರು. ಆದರೆ ಇದು ಪುಟ್ಟ ಕಲಾಂ ಅವರಿಗೆ ಅರ್ಥಬಾಗಿರಲಿಲ್ಲ. ಅವರೊಂದೇ ಅಲ್ಲ, ತರಗತಿಯಲ್ಲಿ ಇನ್ನೂ ಕೆಲವರಿಗೆ ಅರ್ಥವಾಗಿರಲಿಲ್ಲ. ಅಯ್ಯರ್‌ ಅವರು ಮಕ್ಕಳಿಗೆ ಅರ್ಥವಾಗಿದೆಯೇ ಎಂದು ಪ್ರಶ್ನಿಸಿದಾಗ ಹಲವರು ಇಲ್ಲ ಎಂದು ಉತ್ತರ ಕೊಡುತ್ತಾರೆ. ಇದರಿಂದ ಒಂದಿನಿತೂ ಕೋಪಗೊಳ್ಳದೇ ಅಯ್ಯರ್‌ ಅವರು ಪುನಃ ವಿಷಯವನ್ನು ಕಲಿಸುತ್ತೇನೆಂದು ಹೇಳಿ ಈ ಸಲ ವಿದ್ಯಾರ್ಥಿಗಳೆಲ್ಲರನ್ನೂ ಕಡಲ ತೀರಕ್ಕೆ ಕರೆದೊಯ್ಯುತ್ತಾರೆ.

ವಿಶಾಲವಾದ ಸ್ವಚ್ಛಂದ ಕಡಲ ತೀರದಲ್ಲಿ ವಿದ್ಯಾರ್ಥಿಗಳೆಲ್ಲ ಸಂತಸದಿಂದ ಕಲಿಯುವ ಉತ್ಸುಕತೆಯಲ್ಲಿರುವಾಗ ಶಿಕ್ಷಕ ಅಯ್ಯರ್‌ ಅವರು ಅಲ್ಲಿನ ಕಡಲ ಹಕ್ಕಿಗಳ ಹಾರಾಟವನ್ನು ಗಮನಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡುತ್ತಾರೆ. ಅಲ್ಲಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಾರಾಟದ ಬೇರೆ ಬೇರೆ ವಿಷಯಗಳನ್ನು ಕೇವಲ 15 ನಿಮಿಷಗಳಲ್ಲಿ ಅವರು ವಿವರಿಸುತ್ತಾರೆ. ಪ್ರಾಕೃತಿಕ ಪಾಠದಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರೂ ಹಕ್ಕಿಯೊಂದರೆ ಹಾರಾಟದ ಕ್ರಿಯೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುತ್ತಾರೆ. ಹೀಗೇ ಪ್ರಕೃತಿಯಲ್ಲಿ ಲಭ್ಯವಿರುವ ನೇರ ಪ್ರಾಯೋಗಿಕ ಉದಾಹರಣೆಯೊಂದಿಗೆ ಸೈದ್ಧಾಂತಿಕ ಪಾಠವನ್ನು ನೀಡಿದ ಅಂದಿನ ಪಾಠವು ಕಲಾಂರವರಲ್ಲಿ ಹಾರಾಟದ ಕುರಿತು ವಿಶೇಷ ಅನುಭೂತಿ ಮೂಡಿಸಿತ್ತು. ಆ ಕುರಿತಾಗಿ ಅವರ ಆಸಕ್ತಿ ಹೆಚ್ಚಾಯಿತು. ಮುಂದೆ ವಿಮಾನ ಹಾರಾಟದ ಕುರಿತಾಗಿ ಅಧ್ಯಯನ ಮಾಡಬೇಕು ಎಂದು ಕಲಾಂ ಅಂದೇ ಅಂದುಕೊಂಡರು.

ಈ ಕುರಿತು ಮತ್ತೆ ಅದೇ ಶಿಕ್ಷಕರಲ್ಲಿ ಕೇಳಿದಾಗ ಒಂಚೂರೂ ಕೋಪ ಮಾಡದೇ ಕಲಾಂರನ್ನು ಪಕ್ಕಕ್ಕೆ ಕುಳ್ಳಿರಿಸಿಕೊಂಡ ಶಿಕ್ಷಕರು, ಹೈಸ್ಕೂಲ್‌ ಮುಗಿಸಿ ಇಂಜಿನಿಯರಿಂಗ್‌ ಮಾಡಬೇಕು ಮತ್ತು ಇಂಜಿನಿಯರಿಂಗ್‌ ನಲ್ಲಿ ಈ ವಿಷಯವನ್ನು ಆಯ್ದುಕೊಳ್ಳಬೇಕು ಎಂದು ಸಂಪೂರ್ಣವಾಗಿ ವಿವರಣೆ ನೀಡುತ್ತಾರೆ. ಇಲ್ಲಿಂದ ಪ್ರೇರಣೆ ಪಡೆದ ಕಲಾಂ ಮುಂದೆ ಏರೋನಾಟಿಕ್ಸ್‌ ವಿಯದಲ್ಲಿ ಇಂಜಿನಿಯರಿಂಗ್‌ ಮುಗಿಸಿ ಈ ದೇಶಕಂಡ ಅದ್ಭುತ ವಿಜ್ಞಾನಿಯಾಗಿ ಹೊರಹೊಮ್ಮುತ್ತಾರೆ.

ಹೀಗೆ ಶಿಕ್ಷಕನೊಬ್ಬ ಬೆಳೆಯುವ ಸಿರಿಯಾದ ಮಕ್ಕಳ ಮೃದು ಮನಸ್ಸಲ್ಲಿ ಬಿತ್ತಿದ ಬೀಜ ಹೇಗೆ ಮರವಾಗಿ ಸಮಾಜಕ್ಕೆ ಕೊಡುಗೆ ಕೊಡುತ್ತದೆ ಮತ್ತು ವಿದ್ಯಾರ್ಥಿಯೊಬ್ಬನ ಬದುಕು ರೂಪಿಸುವಲ್ಲಿ ಶಿಕ್ಷಕನಾದವನ ಪಾತ್ರದ ಹಿರಿಮೆಯೇನು ಎಂಬುದನ್ನು ಈ ಪುಟ್ಟ ಕಥೆ ವಿವರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!