ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಇಟಲಿ ಮೂಲದ ದಂಪತಿ ದತ್ತು ಪಡೆದು ಮಗುವಿಗೆ ಹೊಸ ಜೀವನ ನೀಡಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ಕಂದಮ್ಮ ಬೆಳಗಾವಿಯಿಂದ ಇಟಲಿಗೆ ಹಾರಿದೆ.
ವಿಶೇಷ ಚೇತನ ಎಂಬ ಕಾರಣಕ್ಕೆ ಹೆತ್ತವರು ಎರಡು ವರ್ಷದ ಹಿಂದೆ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದರು. ಆಗ, ಸ್ಥಳೀಯರ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಮಗು ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿ ಮಠದ ಕೇಂದ್ರದ ಆರೈಕೆಯಲ್ಲಿತ್ತು. ಈ ಮಗುವನ್ನು ಇಟಲಿ ದಂಪತಿ ದತ್ತು ಪಡೆದು ಬೆಚ್ಚಗಿನ ಅಪ್ಪುಗೆ ನೀಡಿದ್ದಾರೆ.
ಆಶ್ರಮದಲ್ಲಿನ ಯಾವುದಾರು ಒಂದು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದ ಇಟಲಿ ದಂಪತಿ ಆರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದೆ ವಿಶೇಷ ಚೇತನ ಮಗುವಿನ ಬಗ್ಗೆ ಆಶ್ರಮದಿಂದ ಮಾಹಿತಿ ಪಡೆದಿದ್ದರು. ಬಳಿಕ, ವಿಶೇಷ ಚೇತನ ಮಗುವಿನ ಆರೈಕೆ, ಚಿಕಿತ್ಸೆಗೆ ಇಟಲಿ ಮೂಲದ ಪಿಜಿಷಿಯನ್ ಡಾ.ಕೂಸ್ತಾಂನ್ಸಾ ಮತ್ತು ಬುಯಾರ್ ಡೆಡೆ ದಂಪತಿ ಸಹಾಯ ಮಾಡುತ್ತಿದ್ದರು.