ಪ್ರಧಾನಿ ಮೋದಿಯ ಕೆಲಸಗಳಿಗೆ ಗೌರವ ಸಲ್ಲಿಸಲು ಇದು ಸದಾವಕಾಶ: ಅಣ್ಣಾಮಲೈ

ಹೊಸದಿಗಂತ ವರದಿ, ಶಿವಮೊಗ್ಗ:

ಹಿಂದೆ ಕೌನ್ ಬನೇಗಾ ಕರೋಡ್ ಪತಿ ಅನ್ನುತ್ತಿದ್ದಂತೆ ಇಂದು ಕೌನ್ ಬನೇಗಾ ಪ್ರಧಾನಿ ಎನ್ನಲಾಗುತ್ತದೆ. ಜನರು ೧೦ ವರ್ಷ ಉತ್ತಮ ಆಡಳಿತ ನೀಡಿದ ಮೋದಿಯವರಿಗೆ ಮತ್ತೆ ೫ ವರ್ಷ ಆಡಳಿತ ನೀಡಲು ಬಯಸಿದ್ದಾರೆ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಬುಧವಾರ ಸಂಜೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬೇಕೆಂದು ೨೦ ವರ್ಷದಿಂದ ಕನಸುಕಾಣುತ್ತಿದ್ದಾರೆ. ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಪ್ರಧಾನಿ ಆಗಬೇಕೆಂದು ಆಸೆಪಡುತ್ತಿದ್ದಾರೆ. ಒಂದು ಕುರಿಗೂ ತನ್ನ ಮಾಲೀಕ ಯಾರು ಎಂಬುದು ತಿಳಿಯುತ್ತದೆ. ಇನ್ನೂ ಜನತೆಗೆ ನಮ್ಮ ಮಾಲೀಕ ಯಾರಾಗಬೇಕು ಎಂಬುದು ತಿಳಿಯುವುದಿಲ್ಲವೆ. ಪ್ರಧಾನಿ ಮೋದಿ ಇದುವರೆಗೂ ಮಾಡಿರುವ ಕೆಲಸಗಳಿಗೆ ಗೌರವ ಸಲ್ಲಿಸಲು ಇದು ಸದಾವಕಾಶವಾಗಿದ್ದು, ಈ ಬಾರಿಯೂ ಅಧಿಕಾರ ನೀಡುವುದು ಉತ್ತಮ ಎಂದರು.

ಇಲ್ಲಿ ಸೇರಿರುವ ಪ್ರತಿಯೊಬ್ಬರ ಒಂದೊಂದು ಮತಗಳು ಮೋದಿಯವರ ಗೆಲುವಿಗೆ ಸಹಕಾರಿಯಾಗಲಿ. ಶಿವಮೊಗ್ಗ ಜಿಲ್ಲೆಯು ಬಿಜೆಪಿಯ ಭದ್ರಕೋಟೆಯಾಗಿದ್ದು, ೪.೫ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿ ಎಂದು ಕರೆನೀಡಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಮೋದಿಯವರು ಕರೋನಾದಂಥ ಸಂಕಷ್ಟ ಕಾಲದಲ್ಲೂ ೨೦೦ ಕೋಟಿ ವ್ಯಾಕ್ಸಿನ್ ನೀಡಿ ದೇಶಕಟ್ಟುವ ಪ್ರಯತ್ನ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಬಹಳಷ್ಟು ಪ್ರಯತ್ನ ಮಾಡಿದ್ದು, ಎಂಪಿಎಂಗೆ ಕೊನೆ ಮೊಳೆ ಹೊಡೆದಿದ್ದು ನಾವಲ್ಲ, ಸಿದ್ದರಾಮಯ್ಯ ಸರ್ಕಾರ ಎಂದು ಆರೋಪಿಸಿದರು.

ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಎಂ.ಬಿ ಭಾನುಪ್ರಕಾಶ್, ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ರಾಮಲಿಂಗಯ್ಯ, ಆರ್.ಎಸ್ ಶೋಭ, ವಿ. ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಅನುಪಮ ಚನ್ನೇಶ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಮಧುಸೂಧನ್, ವಿಜಯಮ್ಮ, ಉದಯ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಶಾಪುಟ್ಟಸ್ವಾಮಿ ಸಂಗಡಿಗರು ಪ್ರಾರ್ಥಿಸಿದರು. ಧರ್ಮಪ್ರಸಾದ್ ಸ್ವಾಗತಿಸಿದರು. ಮಂಜುನಾಥ್ ಕದಿರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೈತ್ರ ಸಜ್ಜನ್ ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!