ಅಯ್ಯರ್ -ಗಿಲ್ ಶತಕದ ಆಟ: ಆಸೀಸ್‌ ಗೆಲುವಿಗೆ 400 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್ ಗಿಲ್ ಅಮೋಘ ಶತಕ ಹಾಗೂ ನಾಯಕ ಕೆ ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 399 ರನ್ ಬಾರಿಸಿದ್ದು, ಕಾಂಗರೂ ಪಡೆಗೆ 400 ರನ್‌ಗಳ ಕಠಿಣ ಗುರಿ ನೀಡಿದೆ.

ಹೋಳ್ಕರು ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು.

ಎರಡನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್‌ ಗಿಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ಈ ಜೋಡಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಶ್ರೇಯಸ್ ಅಯ್ಯರ್ ಕೇವಲ 86 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಶ್ರೇಯಸ್ ಅಯ್ಯರ್ 90 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 105 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ ತಮ್ಮ ಖಾತೆಗೆ ಮತ್ತೊಂದು ಶತಕ ಸೇರಿಸಿಕೊಂಡರು. ಅಂತಿಮವಾಗಿ ಗಿಲ್ 92 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಶುಭ್‌ಮನ್ ಗಿಲ್ 97 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿ ಕ್ಯಾಮರೋನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ 4ನೇ ವಿಕೆಟ್‌ಗೆ ನಾಯಕ ಕೆ ಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಜೋಡಿ ಕೇವಲ 33 ಎಸೆತಗಳಲ್ಲಿ 59 ರನ್‌ಗಳ ಜತೆಯಾಟವಾಡಿದರು. ಇಶಾನ್ ಕಿಶನ್ ಕೇವಲ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಬಾರಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರು. ಇನ್ನು ಸಿಕ್ಸರ್ ಮೂಲಕವೇ ಖಾತೆ ತೆರೆದ ನಾಯಕ ಕೆ ಎಲ್ ರಾಹುಲ್ ಕೂಡಾ ಮತ್ತೊಂದು ಆಕರ್ಷಕ ಅರ್ಧಶತಕ ಚಚ್ಚಿದರು. ರಾಹುಲ್ 38 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ ಬಾರಿಸಿ ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಸೂರ್ಯಕುಮಾರ್ ಯಾದವ್ ಮತ್ತೊಂದು ಸ್ಪೋಟಕ ಅರ್ಧಶತಕ ಸಿಡಿಸಿದರು. ಅದರಲ್ಲೂ ಕ್ಯಾಮರೋನ್ ಗ್ರೀನ್ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್ ಚಚ್ಚಿ ರನ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು. ಅಂತಿಮವಾಗಿ ಸೂರ್ಯಕುಮಾರ್ ಯಾದವ್ 37 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 72 ರನ್ ಬಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!