ಜ. 30 ರಂದು ಸಿಎಂ ಬೊಮ್ಮಾಯಿ ಅವರಿಂದ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಕನ್ವೆನ್ಷನ್ ಹಾಲ್ ಲೋಕಾರ್ಪಣೆ!

ಹೊಸದಿಗಂತ ವರದಿ,ಶಿವಮೊಗ್ಗ:

ಜಿಲ್ಲಾ ಬಂಜಾರ ಸಂಘದಿಂದ ಬಾಲರಾಜ ಅರಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಂಜಾರ ಕನ್ವೆನ್ಷನ್ ಹಾಲ್ ಜನವರಿ 30 ರಂದು ಲೋಕಾರ್ಪಣೆ ಆಗಲಿದೆ.
ಅಂದು ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವನವನ್ನು ಉದ್ಘಾಟಿಸಲಿದ್ದಾರೆ. ನಂತರ ಎನ್‌ಇಎಸ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಕೆ.ಸಿ. ನಾರಾಯಣ ಗೌಡ, ಆರಗ ಜ್ಞಾನೇಂದ್ರ ಇನ್ನಿತರರು ಭಾಗವಹಿಸಲಿದ್ದಾರೆ. ಅಂದು ಸಂಜೆ 6 ರಿಂದ ಖ್ಯಾತ ಗಾಯಕಿ ಮಂಗ್ಲಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲಾ ಬಂಜಾರ ಸಂಘ 1970 ರಲ್ಲಿ ರಚನೆ ಆಯಿತು. ಸಮಾಜಕ್ಕೆ ಒಂದು ಜಾಗ ನೀಡುವಂತೆ ಆಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅದರಂತೆ 1973-74 ರಲ್ಲಿ ಜಿಲ್ಲಾಡಳಿತ 100*200 ಅಡಿ ಅಳತೆ ಜಾಗ ಮಂಜೂರು ಮಾಡಿತ್ತುಘಿ. ಆಗ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು ಎಂದರು.
2021ರ ಏಪ್ರಿಲ್‌ನಲ್ಲಿ ಸಂಘದ ಅಧ್ಯಕ್ಷನಾಗಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಭವನ ನಿರ್ಮಾಣದ ಕನಸು ಎಲ್ಲರೂ ಹೊಂದಿದ್ದರು. ಅದನ್ನೇ ಸಾಕಾರ ಮಾಡಲು ನಿರ್ಧರಿಸಲಾಯಿತು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಸುಮಾರು 4 ಕೋಟಿ ರೂ. ಅನುದಾನ ಹಾಕಿಸಿಕೊಟ್ಟಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!