ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬರಿಯಾಮಾ ಪ್ರದೇಶದಲ್ಲಿ ಭಾನುವಾರ ನಡೆದ ಭದ್ರತಾಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಮುಖಾಮುಖಿಯಲ್ಲಿ ಗುಂಡಿನ ದಾಳಿಗೆ ಓರ್ವ ಭಯೋತ್ಪಾದಕ ಹತನಾಗಿದ್ದಾನೆ.
ಈ ಭಾಗದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದವು. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಓರ್ವ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗೆ ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಸಾಥ್ ನೀಡಿದ್ದಾರೆ.
ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಮ್ಮು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.
ಶನಿವಾರವಷ್ಟೇ ರಜೌರಿಯ ಖಾವಾಸ್ ಪ್ರದೇಶದಲ್ಲಿ ಭದ್ರತಾಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಮುಖಾಮುಖಿ ನಡೆದಿತ್ತು. ಎನ್ ಕೌಂಟರ್ ನಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದ.