May 2, 2026
Saturday, May 2, 2026
spot_img

ಜಬಲ್ಪುರ ದುರಂತ | ಜಾಲಿ ರೈಡ್‌ಗೆಂದು ಹೊರಟಿದ್ದ ಬೋಟ್‌ ಸಾವಿನ ಮನೆಯಾಗಿ ಬದಲಾಗಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಜಬಲ್ಪುರದ ಬೋಟ್‌ ದುರಂತದಲ್ಲಿ ಒಟ್ಟಾರೆ 28 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಜಾಲಿ ರೈಡ್‌ಗೆಂದು ಬೋಟ್‌ ಹತ್ತಿದ ಜನರಿಗೆ ಇದು ತಮ್ಮ ಜೀವನದ ಕಡೆಯ ಪಯಣ ಅನ್ನೋದು ಗೊತ್ತಾಗಿಯೇ ಇರಲಿಲ್ಲ!

ಮಧ್ಯಪ್ರದೇಶದ ಜಬಲ್ಪುರದ ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ಹಾಯಾಗಿ ಸಾಗ್ತಾ ಇದ್ದ ಬೋಟ್‌ ಇದ್ದಕ್ಕಿದ್ದಂತೆಯೇ ಬಿರುಗಾಳಿಗೆ ಸಿಲುಕಿ ಮಗುಚಿಕೊಂಡಿತ್ತು. ಈ ದುರ್ಘಟನೆಯಲ್ಲಿ ಇದುವರೆಗೂ ನಾಲ್ಕು ವರ್ಷದ ಮಗು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ ಬೋಟ್‌ 40 ಪ್ರಯಾಣಿಕರನ್ನು ತುಂಬಿಸಿಕೊಂಡು ಪಯಣ ಆರಂಭ ಮಾಡಿತು. ಬೋಟ್‌ನಲ್ಲಿ ಮಕ್ಕಳು, ಮಹಿಳೆಯರು ಎಲ್ಲರೂ ವ್ಯೂ ಹಾಗೂ ನೀರಿನ ಸದ್ದನ್ನು ಎಂಜಾಯ್‌ ಮಾಡ್ತಿದ್ರು. ಈ ವೇಳೆ ಬೀಸಿದ ಬಿರುಗಾಳಿ ಜನರ ಜೀವಗಳನ್ನೇ ಕಸಿದುಕೊಂಡುಬಿಟ್ಟಿತ್ತು.

ಸುಮಾರು 90 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಈ ದೋಣಿಯಲ್ಲಿ ಕೇವಲ 40 ಪ್ರಯಾಣಿಕರಿದ್ದರು. ದೋಣಿ ಮಗುಚಿ ಮುಳುಗಿದ ಪರಿಣಾಮವಾಗಿ ಹಲವರು ದೋಣಿಯೊಳಗೆ ಸಿಲುಕಿಕೊಂಡಿದ್ದರು. ಇದರಿಂದಲೂ ಸಾಕಷ್ಟು ಜನರ ಪ್ರಾಣ ಕ್ಷಣದಲ್ಲೇ ಹಾರಿಹೋಗಿತ್ತು. ಅದರಲ್ಲಿಯೂ ತಾಯಿಯೊಬ್ಬರು ತಮ್ಮ ನಾಲ್ಕು ವರ್ಷದ ಕಂದಮ್ಮನನ್ನು ತಬ್ಬಿಕೊಂಡೇ ಪ್ರಾಣ ಬಿಟ್ಟಿದ್ದಾರೆ. ಈ ಫೋಟೊ ಇದೀಗ ಎಲ್ಲ ಕಡೆ ವೈರಲ್‌ ಆಗುತ್ತಿದ್ದು, ಸಾವಿನಲ್ಲೂ ಕಂದನನ್ನು ಒಬ್ಬಂಟಿಯಾಗಿ ಹೋಗಲು ಬಿಡದ ತಾಯಿ ಹೃದಯವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಈ ಬಗ್ಗೆ ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಮಾತನಾಡಿ, ಇನ್ನೂ 6 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಯ ನಂತರ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನು, ಕಾಣೆಯಾದ ಪ್ರಯಾಣಿಕರಿಗಾಗಿ ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಅರ್‌ಎಫ್ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಹೈಡ್ರಾಲಿಕ್ ಕ್ರೇನ್‌ಗಳನ್ನು ಬಳಸಿಕೊಂಡು ಬೋಟ್ ಅನ್ನು ಜಲಮೂಲದಿಂದ ಹೊರತಗೆಯಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆಯ ಕುರಿತು ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ದಳದ ಮಹಾನಿರ್ದೇಶಕರು, ಮಧ್ಯಪ್ರದೇಶ ಸರ್ಕಾರದ ಕಾರ್ಯದರ್ಶಿ ಮತ್ತು ಜಬಲ್‌ಪುರ ವಿಭಾಗದ ಕಮಿಷನರ್ ಅವರನ್ನೊಳಗೊಂಡ ಸಮಿತಿಯು ಈ ತನಿಖೆಯನ್ನು ನಡೆಸಲಿದೆ. ಅಪಘಾತದ ನಿಖರ ಕಾರಣಗಳು, ಕ್ರೂಸ್ ಕಾರ್ಯಾಚರಣೆಯ ನಿಯಮಗಳ ಪಾಲನೆಯಾಗಿದೆಯೇ ಎಂಬ ವಿಷಯ ಮತ್ತು ಇತರ ಸಂಬಂಧಿತ ಅಂಶಗಳನ್ನು ಈ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !