ಹೊಸದಿಗಂತ ವರದಿ ದಾವಣಗೆರೆ:
ಅಗತ್ಯ ವಸ್ತುಗಳ ಬೆಲೆ ದೇಶಾದ್ಯಂತ ಏರಿಕೆಯಾಗಿವೆ. ಬಿಜೆಪಿ ನಾಯಕರು ಮೊದಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಇಲ್ಲವಾದರೆ ನಾವೇ ಒಗ್ಗಟ್ಟಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ದೂರಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದ ರೈತರಿಗೆ ಏನೇ ಪರಿಹಾರ ಕೊಡಬೇಕಿದ್ದರೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಕೇಂದ್ರ ಸರ್ಕಾರವಂತೂ ಈವರೆಗೆ ಏನನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಅಕ್ಕಿಯ ಕೃತಕ ಕೊರತೆ ಸೃಷ್ಟಿಸಿ, ದರ ಹೆಚ್ಚಿಸಿ ಅಕ್ರಮವಾಗಿ ಅಕ್ಕಿ ಮಾರಾಟ ಮಾಡಲು ಯತ್ನಿಸುವವರ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಮಾಡುತ್ತಿರುವ ಪಟ್ಟಿ ಕೇಂದ್ರ ಸರ್ಕಾರದಿಂದ ಬಂದಿದೆ. ಕೇಂದ್ರ ನೀಡಿದ ಪಟ್ಟಿಯಂತೆಯೇ ಬಿಪಿಎಲ್ ಕಾರ್ಡ್ ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ತೆರಿಗೆ ಕಟ್ಟುವವರ ಕಾರ್ಡ್ ಗಳನ್ನು ತೆಗೆಯಲು ನರೇಂದ್ರ ಮೋದಿ ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅರ್ಹರ ಕಾರ್ಡ್ ಡಿಲೀಟ್ ಆಗಬಾರದೆಂದು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇ-ಕೆವೈಸಿ ಮಾಡಿಸಲು ನೀಡಿದ್ದ ಅವಧಿಯನ್ನು ಇದೇ ತಿಂಗಳ 30ರವರೆಗೂ ವಿಸ್ತರಿಸಲಾಗಿದೆ. ಜನರು ನಿಗಧಿತ ಅವಧಿಯಲ್ಲಿ ಕಡ್ಡಾಯಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ:
ತೈಲ ಪೂರೈಸುವ ಆಯಿಲ್ ಕಂಪನಿಯವರೇ ಪೆಟ್ರೋಲ್ ಪರೀಕ್ಷೆ ಮಾಡಿಸಿದ್ದಾರೆ. ಪೆಟ್ರೋಲ್ ಸಪ್ಲೈ ಮಾಡುವವರೇ ಪರೀಕ್ಷೆ ಮಾಡಿ ಸರಿ ಇದೆ ಅಂತಾ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಇದು ಯಾವ ನ್ಯಾಯ? ಕೇಂದ್ರ ಸರ್ಕಾರ ರೂಪಿಸಿರುವ ಇ-20 ಮಿಶ್ರಣವನ್ನಷ್ಟೇ ಮಾಡಲಿ. ಅದನ್ನು ಬಿಟ್ಟು ಇ-30 ಮಿಶ್ರಣ ಮಾಡಿದರೆ ಹೇಗೆ? ಹೀಗಿದ್ದರೂ ಅದೇ ಸರಿ ಅಂತಾ ಹೇಳುತ್ತಿದ್ದಾರೆ. ಎಥೆನಾಲ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಮಾಡಿಸಿಲ್ಲ. ಕೇಂದ್ರ ಸರ್ಕಾರ ಮಾನ್ಯತೆ ನೀಡಿದ ಲ್ಯಾಬ್ ನಲ್ಲೇ ಮಾಡಿಸಿದ್ದು, ಸ್ವತಂತ್ರ ಥರ್ಡ್ ಪಾರ್ಟಿಯವರು ಪರೀಕ್ಷಿಸಿದರೆ ಅಸಲಿಯತ್ತು ಗೊತ್ತಾಗಲಿದೆ. ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿಯವರನ್ನು ದಾಖಲೆ ಸಮೇತ ಪ್ರಶ್ನಿಸುತ್ತೇನೆ. ಕೇಂದ್ರದ ಅಸಮರ್ಪಕ ಇಂಧನ ನೀತಿ ಹಾಗೂ ತೈಲ ಸರಬರಾಜುದಾರರ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದಾಗಿ ರಾಜ್ಯದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.



