ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ಆರ್ ಅಶ್ವಿನ್ ಭರ್ಜರಿ ಶತಕ ಸಿಡಿಸಿ ಟೀಮ್ ಇಂಡಿಯಾಕ್ಕೆ ಆಸರೆಯಾಗಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಅಕ್ಷರಶಃ ಬಾಂಗ್ಲಾ ಬೌಲರ್ ಗಳ ಎದುರು ಪರದಾಡಿತು.
ಕೇವಲ 96 ರನ್ ಗಳನ್ನು ಸೇರಿಸುವಷ್ಟರಲ್ಲಿ ಭಾರತದ ಪ್ರಮುಖ 4 ವಿಕೆಟ್ ಗಳು ಪತನವಾದವು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ ರನ್ ಗಳಿಕೆ ಕೂಡ 6 ರನ್ ಗೇ ಸೀಮಿತವಾಯಿತು. ಈ ಹಂತದಲ್ಲಿ ಜೊತೆಗೂಡಿದ ಜೈಸ್ವಾಲ್ ಮತ್ತು ರಿಷಬ್ ಪಂತ್ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.
ಜೈಸ್ವಾಲ್ 56 ರನ್ ಗಳಿಸಿದರೆ, ಪಂತ್ 39 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ 16 ರನ್ ಗಳಿಸಿ ಮೆಹ್ದಿ ಹಸನ್ ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ 7 ವಿಕೆಟ್ ಗೆ ಜೊತೆಗೂಡಿದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೋಡಿ ಬಾಂಗ್ಲಾ ಬೌಲರ್ ಗಳನ್ನು ಕ್ರಮೇಣ ಕಾಡಲು ಆರಂಭಿಸಿದರು. ಈ ಜೋಡಿ 192 ರನ್ ಗಳ ಅಮೋಘ ಜೊತೆಯಾಟವಾಡಿತು.
114 ಎಸೆತಗಳನ್ನು ಎದುರಿಸಿ 85 ರನ್ ಗಳಿಸಿ ರವೀಂದ್ರ ಜಡೇಜಾ ಶತಕದ ಅಂಚಿನಲ್ಲಿದ್ದರೆ, 110 ಎಸೆತಗಳಲ್ಲಿ 102ರನ್ ಗಳಿಸಿರುವ ಅಶ್ವಿನ್ ಬಾಂಗ್ಲಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 2 ಸಿಕ್ಸರ್ ಮತ್ತು 10 ಬೌಂಡರಿಗಳ ಮೂಲಕ ಶತಕ ಸಿಡಿಸಿ ಅಶ್ವಿನ್ ಸಂಭ್ರಮಿಸಿದರು.
ಇನ್ನು ದಿನದಾಟ ಮುಕ್ತಾಯದ ವೇಳೆಗೆ ಭಾರತ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿದ್ದು, 86 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 102 ರನ್ ಗಳಿಸಿರುವ ಅಶ್ವಿನ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.