ಹೊಸದಿಗಂತ ವರದಿ ಚಿತ್ರದುರ್ಗ:
ಪ್ರಧಾನಮಂತ್ರಿಯವರ ಬಹು ಮಹಾತ್ವಾಕಾಂಕ್ಷೆಯ ಯೋಜನೆ ಜಲ್ ಜೀವನ್ ಮಿಷನ್ ಯೋಜನೆಯಡಿ ಇನ್ನೊಂದು ವರ್ಷದೊಳಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಲ್ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಜಲ್ ಜೀವನ್ ಮಿಷನ್ ಯೋಜನೆ ಘೋಷಣೆಯಾದಾಗ ಈ ದೇಶದ ಸುಮಾರು 19.33 ಕುಟುಂಬಗಳ ಪೈಕಿ ಕೇವಲ 3.23 ಕೋಟಿ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು. ಹಾಗಾಗಿ ಉಳಿದ 16.09 ಕೋಟಿ ಕುಟುಂಬಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿತ್ತು, ಇದರಲ್ಲಿ ಈಗಾಗಲೇ 15.16 ಕೋಟಿ ಕುಟುಂಬಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸುಮಾರು 950 ಗ್ರಾಮಗಳು, 1685 ಜನವಸತಿಗಳಿಂದ ಅಂದಾಜು 19 ಲಕ್ಷ ಜನಸಂಖ್ಯೆಯನ್ನು ಚಿತ್ರದುರ್ಗ ಜಿಲ್ಲೆ ಹೊಂದಿದೆ, ಈ ಎಲ್ಲಾ ಜನವಸತಿಗಳಿಗೆ ಇನ್ನೊಂದು ವರ್ಷದೊಳಗಾಗಿ ಪ್ರಧಾನಮಂತ್ರಿಯವರ ಬಹು ಮಹಾತ್ವಾಕಾಂಕ್ಷೆಯ ಯೋಜನೆ ಜಲ್ ಜೀವನ್ ಮಿಷನ್ ಅಡಿ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 2800 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ರೂ.941 ಕೋಟಿ ವೆಚ್ಚದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಲ್ ಜೀವನ್ ಮಿಷನ್ ಯೋಜನೆಯ ಕೆಲವು ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಪ್ರಸ್ತುತ ಕೊಳವೆಬಾವಿಗಳನ್ನು ನೀರಿನ ಮೂಲವಾಗಿ ಅಂದಾಜುಪಟ್ಟಿ ರಚಿಸಲಾಗಿದೆ ಎಂದು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ಇದಕ್ಕೆ ಸಂಸದರು ಯಾವುದೇ ಕಾರಣಕ್ಕೂ ಕೊಳವೆಬಾವಿಗಳನ್ನು ನೀರಿನ ಮೂಲವನ್ನಾಗಿ ನೀವು ಆಯ್ಕೆ ಮಾಡಿಕೊಳ್ಳಬೇಡಿ. ಕೊಳವೆಬಾವಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಹೇಳಿ ಕೇಳಿ ಚಿತ್ರದುರ್ಗ ಬರಪೀಡಿತ ಹಾಗೂ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆ, ಕೊಳವೆ ಬಾವಿಗಳು ಶಾಶ್ವತ ಪರಿಹಾರವಲ್ಲ. ಇದರ ಬದಲಾಗಿ ನೀವು ಮೇಲ್ಮೈ ನೀರಿನ ಮೂಲವನ್ನೇ ಆಶ್ರಯಿಸಿ. ಮೇಲ್ಮೈ ನೀರು ಮಾತ್ರ ಶಾಶ್ವತ ಪರಿಹಾರವಾಗಬಲ್ಲದು ಎಂದು ಕಿವಿಮಾತು ಹೇಳಿದರು.
ಇದಕ್ಕೆ ಉತ್ತರಿಸಿ ಅಧಿಕಾರಿಗಳು, ಈಗಾಗಲೇ ಪಾವಗಡ ತಾಲ್ಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತುಂಗ ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ 560 ಹಳ್ಳಿಗಳಿಗೆ ಈ ನೀರು ಸರಬರಾಜಾಗಲಿದೆ.
ಹೊಳಲ್ಕೆರೆ ತಾಲ್ಲೂಕಿನ 215 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ನೀರಿನ ಮೂಲದಿಂದ ನೀರು ಸರಬರಾಜಾಗುತ್ತದೆ, ಈಗಾಗಲೇ ಸಿರಿಗೆರೆ ಭರಮಸಾಗರ ಹಾಗೂ 45 ಹಳ್ಳಿಗಳಿಗೆ ಶಾಂತಿಸಾಗರ ನೀರಿನ ಮೂಲದಿಂದ ನೀರು ಸರಬರಾಜಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭರಮಸಾಗರದ ಕಾಮಗಾರಿಯನ್ನು ಕಳೆದ ಮೂರು ತಿಂಗಳಿನಿಂದ ನಿಲ್ಲಿಸಲಾಗಿದೆ. ಪೈಪ್ ಅಳವಡಿಸಲಿಕ್ಕೆ ಗುಂಡಿಗಳನ್ನು ತಗೆದು ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಇದಕ್ಕೆ ಏನು ಕಾರಣ ಎಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯಪಾಲಕ ಅಭಿಯಂತರರು ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಈ ರೀತಿ ಆಗಿದೆ, ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಿ ಎರಡು ವರ್ಷವಾದರು ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ, ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ, ಗುಣಮಟ್ಟದ ಪೈಪುಗಳನ್ನು ಹಾಗೂ ನಲ್ಲಿಗಳನ್ನ ಅಳವಡಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದರು.
ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಸರಬರಾಜಾಗಬೇಕು. ಈ ನಿಟ್ಟಿನಲ್ಲಿ ಯಾವುದೇ ರಾಜಿ ಇಲ್ಲ. ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಿದರೆ ಅನೇಕ ಖಾಯಿಲೆಗಳಿಂದ ಅವರನ್ನು ದೂರವಿಡಬಹುದು, ಬಹುತೇಕ ಖಾಯಿಲೆಗಳು ನೀರಿನಂದಲೇ ಬರುತ್ತವೆ ಎನ್ನುವ ವಿಷಯ ನಿಮಗೂ ತಿಳಿದೇ ಇದೆ ಎಂದು ಇಂಜಿನಿಯರ್‍ಗಳಿಗೆ ಸಂಸದರು ತಿಳಿ ಹೇಳಿದರು.
ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿಗಳಾದ ಮಧು ಡಿ.ಆರ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಮಂಜುನಾಥ್ ಎಸ್.ನಾಡರ್, ಎಲ್ಲಾ ತಾಲ್ಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.