ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಬಲೂಚಿಸ್ತಾನದಲ್ಲಿ ಪ್ರಯಾಣಿಕ ರೈಲಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದರ ಜೊತೆಗೆ 450ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಇದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚಿಸ್ತಾನ್ ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಬೋಲಾನ್ ಪ್ರದೇಶದಲ್ಲಿ ಹೈಜಾಕ್ ಮಾಡಿದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಭಯಾನಕ ಸಂಘಟನೆಯು ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹಿಡಿತ ಸಾಧಿಸಿದೆ. ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ವಶಪಡಿಸಿಕೊಂಡು ಲಿಬರೇಶನ್ ಆರ್ಮಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿದೆ. ಉಗ್ರ ಸಂಘಟನೆಯು ರೈಲನ್ನು ಸ್ಫೋಟಿಸುವ ಬೆದರಿಕೆ ಹಾಕಿದೆ.
ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಬಂಡುಕೋರ ಗುಂಪು ಎಚ್ಚರಿಕೆ ನೀಡಿದೆ. ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಬಿಎಲ್‌ಎ, ಭದ್ರತಾ ಸಿಬ್ಬಂದಿ ಸೇರಿದಂತೆ ರೈಲಿನಿಂದ ಒತ್ತೆಯಾಳುಗಳನ್ನು ಸೆರೆಹಿಡಿದಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಬೋಲಾನ್‌ನ ಧದರ್‌ನ ಮಶ್ಕಾಫ್‌ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಅಳಿಯನ್ನು ಉಗ್ರರು ಸ್ಫೋಟಿಸಿದ್ದಾರೆ. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಅಳಿ ತಪ್ಪಿದ್ದು, ದಾಳಿ ನಡೆಸಿದ ನಮ್ಮ ಉಗ್ರರು ರೈಲನ್ನು ಹೈಜಾಕ್ ಮಾಡಿದ್ದಾರೆ ಎಂದು ಉಗ್ರರ ಗುಂಪು ಹೇಳಿಕೊಂಡಿದೆ.
ಸದ್ಯ ಸ್ಥಳೀಯ ಸರ್ಕಾರವು ತುರ್ತು ಕ್ರಮಕ್ಕೆ ಮುಂದಾಗಿದ್ದು, ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನದಲ್ಲಿ ತೊಡಗಿದೆ.
ಇದರ ನಡುವೆ ನಾವು ರೈಲನ್ನು 100ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದೇವೆ. ನಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೂ ಅದರ ಪರಿಣಾಮ ತೀವ್ರವಾಗಿರುತ್ತದೆ. 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಗಲ್ಲಿಗೇರಿಸಲಾಗುವುದು. ಈ ರಕ್ತಪಾತದ ಸಂಪೂರ್ಣ ಜವಾಬ್ದಾರಿ ಸೇನೆಯೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.