June 21, 2026
Sunday, June 21, 2026
spot_img

ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣೆ |ಸಮಾಜದ ಔನ್ನತ್ಯಕ್ಕೆ ಬಳಕೆಯಾಗಲಿ: ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ವರದಿ ಬೆಳಗಾವಿ :

ತಮ್ಮ ಜೀವನವನ್ನೇ ಸಮಾಜ ಸೇವೆಗೆ ಸಮರ್ಪಿಸಿದ ಜಗನ್ನಾಥ ರಾವ್ ಜೋಶಿ ಅವರ ಸ್ಮರಣಾರ್ಥ ನಿರ್ಮಿಸಲಾದ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನವನ್ನು ಇಡೀ ಸಮಾಜಕ್ಕೆ ಅರ್ಪಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಭಾನುವಾರ ನಗರದ ಸಂಘ ಸದನದಲ್ಲಿ ನ್ಯೂ ಗೂಡ್ಸ ಶೆಟ್ ರಸ್ತೆಯಲ್ಲಿರುವ ಭವ್ಯ ಅಂತಸ್ಥಿನ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನದ ಲೋಕಾರ್ಪಣೆಗೊಳಿಸಿದ ಬಳಿಕ ವೇಧಿಕೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಜನವಿಕಾಸ ಮತ್ತು ಜನಕಲ್ಯಾಣದ ಉದ್ದೇಶದಿಂದ ಈ ಭವನ ನಿರ್ಮಿಸಲಾಗಿದೆ. ಭವನ ನಿರ್ಮಾಣಕ್ಕೆ ಬಳಸಿರುವ ಪ್ರತಿಯೊಂದು ಪೈಸೆಯೂ ಸದುಪಯೋಗವಾಗಬೇಕು ಹಾಗೂ ಪ್ರತಿಯೊಂದು ಇಂಚು ಜಾಗವೂ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು ಎಂದು ಹೇಳಿದರು.

ಜಗನ್ನಾಥ ರಾವ್ ಜೋಶಿ ಅವರು ಜಾತಿ, ಮತ, ಧರ್ಮಗಳ ಗಡಿಗಳನ್ನು ಮೀರಿ ಬದುಕಿದ ಮಹನೀಯರಾಗಿದ್ದು, ದೇಶಸೇವೆಯನ್ನೇ ಪರಮೋಚ್ಚ ಗುರಿಯನ್ನಾಗಿಸಿಕೊಂಡಿದ್ದರು. ಜನರಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅವರು ಅತ್ಯಂತ ಸರಳ ಜೀವನ ನಡೆಸಿದ್ದರು. ಅವರ ಸಾರ್ಥಕ ಜೀವನಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸ್ಮಾರಕ ಭವನ ನಿರ್ಮಿಸಲಾಗಿದೆ ಎಂದರು.
ಸಮಾಜದ ಔನ್ನತ್ಯ ಮತ್ತು ಜನಕಲ್ಯಾಣದ ಕಾರ್ಯಗಳಿಗೆ ಈ ಭವನ ಕೇಂದ್ರವಾಗಲಿ. ಜಗನ್ನಾಥ ರಾವ್ ಜೋಶಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯಕ್ಕೆ ಇದು ನೆರವಾಗಲಿ ಎಂದು ಅವರು ಆಶಿಸಿದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಸ್ವಾಗತಿಸಿದರು. ಜನಕಲ್ಯಾಣ ಟ್ರಸ್ಟ್ನ ನಿರ್ವಾಹಕ ವಿಶ್ವಸ್ಥ ಅರವಿಂದ ರಾವ್ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಎಸ್ಎಸ್ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಗವಾಡ ಸೇರಿದಂತೆ ಹಲವು ಸಂಘದ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವರಾದ ಸಿ.ಟಿ. ರವಿ, ಮುರುಗೇಶ ನಿರಾಣಿ, ಕೆ.ಎಸ್. ಈಶ್ವರಪ್ಪ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ , ಜನಪ್ರತಿನಿಧಿಗಳು, ಸಂಘದ ಪ್ರಮುಖರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !