ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮನೆ ಊಟ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ. ಇದರಿಂದ ದರ್ಶನ್ಗೆ ಜೈಲೂಟವೇ ಫಿಕ್ಸ್ ಆಗಿದೆ.
ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಪರ ಎಸ್ಪಿಪಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಅದರಂತೆ ತೀರ್ಪು ಪ್ರಕಟಗೊಂಡಿದೆ.
ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021ರ ಸೆಕ್ಷನ್ 728ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಅಲ್ಲದೆ ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಜತೆಗೆ ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ. ಹೀಗಾಗಿ ದರ್ಶನ್ ಅರ್ಜಿ ವಜಾಗೊಂಡಿದೆ.