ʼಅರುಣಾಚಲ ಪ್ರದೇಶದ ಭಾಗ ಭಾರತಕ್ಕೆ ಸೇರುವುದು ನೆಹರೂಗೆ ಬೇಕಿರಲಿಲ್ಲʼ ಎಂಬ ರಿಜಿಜು ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
“ಅರುಣಾಚಲ ಪ್ರದೇಶದ ಭಾಗ ಭಾರತಕ್ಕೆ ಸೇರುವುದು ನೆಹರೂ ಅವರಿಗೆ ಇಷ್ಟವಿರಲಿಲ್ಲ” ಎಂಬ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.
ತವಾಂಗ್‌ (ಅರುಣಾಚಲ ಪ್ರದೇಶದ ಪ್ರಮುಖ ನಗರ) ಭಾರತಕ್ಕೆ ಸೇರುವಲ್ಲಿ ನೆಹರೂ ಪಾತ್ರದ ಬಗ್ಗೆ ಕೇಂದ್ರ ಸಚಿವ ರಿಜಿಜು ಸಂದರ್ಶನವೊಂದರಲ್ಲಿ, ʼಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ತವಾಂಗ್ ಅನ್ನು ಭಾರತಕ್ಕೆ ಸೇರಿಸುವುದರ ಬಗ್ಗೆ ಅಸಮಾಧಾನ ಹೊಂದಿದ್ದರುʼ ಎಂದು ಹೇಳಿದ್ದರು.
“ನೀವು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ, ಜೊತೆಗೆ ಇತಿಹಾಸವನ್ನು ಮರೆಮಾಡಬಾರದು ಕೂಡ, ಅದು ಹೊರಬರಬೇಕು, ಜನರಿಗೆ ತಿಳಿಯಬೇಕು” ಎಂದು ಹೇಳಿದರು.
ʼ1951 ರಲ್ಲಿ ಅಸ್ಸಾಂನ ಅಂದಿನ ಗವರ್ನರ್ ದೌಲತ್ ರಾಮ್ ಗೋಪಾಲದಾಸ್ ಅವರು ತವಾಂಗ್‌ನಲ್ಲಿ ಟಿಬೆಟ್ ಅಧಿಕಾರಿಗಳ ವಿರುದ್ಧ ಅಸ್ಸಾಂ ರೈಫಲ್‌ ಪಡೆಯೊಂದಿಗೆ ಕಾಡಾಡಿದಾಗ ಪಂಡಿತ್ ನೆಹರು ಅವರನ್ನು ಗದರಿಸಿದ್ದರು. ನೀವು ಯಾರ ಅನುಮತಿಯೊಂದಿಗೆ ಭಾರತೀಯ ಪಡೆಯನ್ನು ಕಳುಹಿಸಿದ್ದೀರಿ ಎಂದು ಕೇಳಿದ್ದರು. ಇದು ನಾನು ಹೇಳುತ್ತಿಲ್ಲ. ದಾಖಲಾದ ಇತಿಹಾಸʼ ಎಂದು ಎಂದು ಕಿರಣ್ ರಿಜಿಜು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಸಿರುವ ಕಾಂಗ್ರೆಸ್ ಅರುಣಾಚಲದ ಬಗ್ಗೆ ತನ್ನ 1951 ರ ವಾದದ ಮೇಲಿನ ನಿಲುವನ್ನು ಸಮರ್ಥಿಸಿಕೊಂಡಿದೆ. ಜೊತೆಗೆ ಆಗಿನ ಪ್ರಧಾನಿ ಪಂಡಿತ್ ನೆಹರು ಅವರು ಕೈಗೊಂಡ ಕ್ರಮಗಳ ಬಗ್ಗೆ ಪತ್ರಿಕಾ ದಾಖಲೆಗಳೊಂದಿಗೆ ತಿರುಗೇಟು ನೀಡಿದೆ.
ಜೈರಾಮ್ ರಮೇಶ್ ಅವರು ಟ್ವೀಟ್‌ಗಳ ಸರಣಿಯಲ್ಲಿ, “ಮೋದಿಯವರ ಅಸ್ಪಷ್ಟ ವಿಚಾರಧಾರೆಗಳಿಗೆ ಇತ್ತೀಚಿನ ಪ್ರವೇಶದಾರ ಕಿರಣ್ ರಿಜಿಜು, ಈಗ ನೆಹರೂ ಅವರು ತವಾಂಗ್ ಭಾರತದ ಭಾಗವಾಗಲು ಬಯಸಲಿಲ್ಲ ಎಂದು ಹೇಳುತ್ತಾರೆ. ಈ ಸಂಪೂರ್ಣ ಸುಳ್ಳನ್ನು 2 ಉನ್ನತ ರಹಸ್ಯ ಟೆಲಿಗ್ರಾಮ್‌ಗಳಿಂದ ಬಹಿರಂಗಪಡಿಸುತ್ತೇವೆ. ಈ ಟೆಲಿಗ್ರಾಮ್‌ ಗಳಲ್ಲಿ ಮೊದಲ ಟೆಲಿಗ್ರಾಮ್ ಅನ್ನು ಮಾರ್ಚ್ 11 1951 ರಂದು, ಆಗಿನ ಪ್ರಧಾನಿ ನೆಹರು ಅವರು ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಕಳುಹಿಸಿದ್ದರು. ಎರಡನೇ ಟೆಲಿಗ್ರಾಮ್ ಮಾರ್ಚ್ 14 1951 ರಂದು ನೆಹರು ಸಂಬಂಧಪಟ್ಟ ಸಚಿವರಿಗೆ ಕಳುಹಿಸಿದ್ದರು.
“ಟಿಬೆಟಿಯನ್ನರು ಆಡಳಿತ ನಡೆಸುತ್ತಿರುವ ತವಾಂಗ್ 1914 ರ ಗಡಿ ಒಪ್ಪಂದದ ಪ್ರಕಾರ ನಮಗೆ ಸೇರುತ್ತದೆ. ಇದಕ್ಕಾಗಿ ಟಿಬೆಟಿಯನ್ ಸರ್ಕಾರದಿಂದ ಔಪಚಾರಿಕ ಪ್ರಾತಿನಿಧ್ಯಕ್ಕಾಗಿ ಕಾಯುವುದು ಅಗತ್ಯವೆಂದು ನಾವು ಭಾವಿಸುವುದಿಲ್ಲ” ಎಂದು ಈ ವಿಷನ್ ಡಾಕ್ಯುಮೆಂಟ್ ನಲ್ಲಿ ಹೇಳಲಾಗಿದೆ.
ಈ ಎರಡೂ ಟೆಲಿಗ್ರಾಮ್‌ಗಳನ್ನು ಅವತಾರ್ ಸಿಂಗ್ ಭಾಸಿನ್ (2018) ಅವರು ಸಂಪಾದಿಸಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!