ಟೀಂ ಇಂಡಿಯಾಗೆ ಜೈಸ್ವಾಲ್ ಆಸರೆ: ದಿನದಾಟದಂತ್ಯಕ್ಕೆ 219/ 7

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ.

ಇಂಗ್ಲೆಂಡ್ ತಂಡವನ್ನು 353 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 219 ರನ್ ಬಾರಿಸಿದ್ದು, ಇನ್ನು 134 ರನ್‌ಗಳ ಹಿನ್ನಡೆಯಲ್ಲಿದೆ. ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್(30) ಹಾಗೂ ಕುಲ್ದೀಪ್ ಯಾದವ್(17) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ ಕೇವಲ ಎರಡು ರನ್ ಗಳಿಸಿ ಜೇಮ್ಸ್ ಆಂಡರ್‌ಸನ್ ಬೌಲಿಂಗ್‌ನಲ್ಲಿ ಬೆನ್ ಫೋಕ್ಸ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ 82 ರನ್‌ಗಳ ಜತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಗಿಲ್ 38 ರನ್ ಗಳಿಸಿ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು.

ಕಳೆದೆರಡು ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್, ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸಮಯೋಚಿತ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಜೈಸ್ವಾಲ್ 117 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 73 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಜತ್ ಪಾಟೀದಾರ್, ರವೀಂದ್ರ ಜಡೇಜಾ ಹಾಗೂ ಸರ್ಫರಾಜ್ ಖಾನ್ ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. ಪಾಟೀದಾರ್ 17 ರನ್‌ಗೆ ವಿಕೆಟ್ ಒಪ್ಪಿಸಿದರೆ, ಜಡೇಜಾ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕಳೆದ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಸರ್ಫರಾಜ್ ಖಾನ್ ಬ್ಯಾಟಿಂಗ್ 14 ರನ್‌ಗೆ ಸೀಮಿತವಾಯಿತು. ಬೌಲಿಂಗ್ ಆಲ್ರೌಂಡರ್ ಅಶ್ವಿನ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!