MLC T20 ಲೀಗ್‌ ನಲ್ಲಿ ಅಬ್ಬರಿಸಿದ ಜೇಕ್ ಮೆಕ್‌ಗರ್ಕ್! ಇದೆ ರೀತಿ ಡೆಲ್ಲಿ ಪರ ಆಡಿದ್ರೆ ಬೇರೇನೇ ಆಗ್ತಿತ್ತು !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ 2025 ಮುಕ್ತಾಯವಾದ ತಕ್ಷಣವೇ ಅಮೆರಿಕಾದ ಮೇಜರ್ ಲೀಗ್ ಕ್ರಿಕೆಟ್ (MLC T20) ಗಮನ ಸೆಳೆಯುತ್ತಿದೆ. ಐಪಿಎಲ್ ಫ್ರಾಂಚೈಸಿಗಳ ಮಾಲಿಕತ್ವದ ಈ ಲೀಗ್ ಕೂಡ ಇದೀಗ ಕ್ರಿಕೆಟ್ ಅಭಿಮಾನಿಗಳ ಮನಸೆಳೆದಿದೆ. MLC 2025ರಲ್ಲಿ, ಕಳೆದ ಬಾರಿಯ ರನ್ನರ್ ಅಪ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಮ್ಮ ಆಘಾತಕಾರಿ ಆಟದ ಮೂಲಕ ಸತತ ಎರಡನೇ ಗೆಲುವು ದಾಖಲಿಸಿದೆ.

ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 32 ರನ್‌ಗಳ ಜಯವನ್ನು ಸಾಧಿಸಿದ್ದು, ಟೂರ್ನಿಯಲ್ಲಿ ತಮ್ಮ ಪರಾಕ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಸ್ಯಾನ್ ಫ್ರಾನ್ಸಿಸ್ಕೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಈ ಭರ್ಜರಿ ಸ್ಕೋರ್‌ನ ಹಿಂದೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗರ್ಕ್ ಅವರ ಬಿರುಗಾಳಿ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿತು. ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ 88 ರನ್ ಗಳಿಸಿದ ಅವರು, ನೈಟ್ ರೈಡರ್ಸ್ ಬೌಲರ್‌ಗಳ ಮೇಲೆ ತೀವ್ರ ಹೊಡೆತ ನೀಡಿದರು. ಫಿನ್ ಅಲೆನ್ ಕೂಡ ಅರ್ಧಶತಕ ಬಾರಿಸಿ ಉತ್ತಮ ಬೆಂಬಲ ನೀಡಿದರು.

ಲಾಸ್ ಏಂಜಲೀಸ್ ತಂಡ 220 ರನ್‌ಗಳ ಗುರಿ ಬೆನ್ನಟ್ಟಿದರೂ 19.5 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ವಾನ್ ಶಾಲ್ಕ್‌ವಿಕ್ 3 ವಿಕೆಟ್ ಪಡೆದರು, ಬಾಕಿ ಬ್ಯಾಟರ್‌ಗಳು ನಿನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ.

ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳಪೆಯಾಟವಾಡಿದ್ದ ಮೆಕ್‌ಗರ್ಕ್, ಈಗ MLCನಲ್ಲಿ ತಮ್ಮ ಪ್ರತಿಭೆಯನ್ನು ಸ್ಫೋಟಕ ರೀತಿಯಲ್ಲಿ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಕೇವಲ 55 ರನ್ ಗಳಿಸಿ ತಂಡದಿಂದ ಹೊರಬಿದ್ದಿದ್ದರು. ಆದರೆ ಈ ಪ್ರದರ್ಶನದಿಂದಾಗಿ ಮುಂದಿನ ಆವೃತ್ತಿಗಳಲ್ಲಿ ಮತ್ತೊಮ್ಮೆ ಅವಕಾಶ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!