ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೂ ನಲ್ಲಿ ನೀರು ಸಂಪರ್ಕ ಒದಗಿಸುವ ಗುರಿಯೊಂದಿಗೆ ಜಾರಿಗೆ ಬಂದ ಜಲ್ ಜೀವನ್ ಮಿಷನ್ ಯೋಜನೆಯು ಪ್ರಸ್ತುತ ಗ್ರಾಮೀಣ ಪ್ರದೇಶದ 55 ಶೇ. ಮನೆಗಳಿಗೆ ನಲ್ಲಿ ನೀರು ಒದಗಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 15 ಆಗಸ್ಟ್ 2019 ರಂದು ಕೆಂಪು ಕೋಟೆಯ ಆವರಣದಿಂದ ಜಲ ಜೀವನ್ ಮಿಷನ್ ಅನ್ನು ಘೋಷಿಸಿದರು.
ಜಲ ಜೀವನ್ ಮಿಷನ್ ಘೋಷಣೆಯ ಸಮಯದಲ್ಲಿ, ಕೇವಲ 3.23 ಕೋಟಿ (ಶೇ 17) ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಜೆಜೆಎಂ ಅಡಿಯಲ್ಲಿ, ಸುಮಾರು 7.48 ಕೋಟಿ (ಶೇ. 38) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಪ್ರಸ್ತುತ ದೇಶದ 19.36 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ, 10.71 ಕೋಟಿ (ಶೇ. 55) ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಲ್ಲಿ ನಲ್ಲಿ ನೀರಿನ ಪೂರೈಕೆಯನ್ನು ಹೊಂದಿವೆ ಎಂದು ಮೂಲಗಳು ವರದಿ ಮಾಡಿವೆ.
ಜಲಶಕ್ತಿ ಸಚಿವಾಲಯದ ಪ್ರಕಾರ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ ಹಾಗು ಗೋವಾ, ಗುಜರಾತ್, ಹರಿಯಾಣ, ಮತ್ತು ತೆಲಂಗಾಣ ರಾಜ್ಯಗಳು ಗ್ರಾಮೀಣ ಕುಟುಂಬಗಳಲ್ಲಿ ನಲ್ಲಿ ನೀರಿನ ಸಂಪರ್ಕದ 100 ಪ್ರತಿಶತ ವ್ಯಾಪ್ತಿಯನ್ನು ಸಾಧಿಸಿದೆ. ಬಿಹಾರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳು ಶೇಕಡಾ 95 ರಷ್ಟು ವ್ಯಾಪ್ತಿಯನ್ನು ಸಾಧಿಸಿವೆ.
2021-22ರಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 40,000 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, 2022-23 ರ ಜಲ ಜೀವನ್ ಮಿಷನ್ ಅಡಿಯಲ್ಲಿ ಬಜೆಟ್ ಅನ್ನು 60,000 ಕೋಟಿಗೆ ಹೆಚ್ಚಿಸಲಾಗಿದೆ. ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೂ ನಲ್ಲಿ ನೀರು ವ್ಯವಸ್ಥೆ ಹೆಚ್ಚಿಸಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.