October 15, 2026
Thursday, October 15, 2026
spot_img

ಜಲ ಜೀವನ್ ಮಿಷನ್ ಹಗರಣ: ರಾಜಸ್ಥಾನದ ಮಾಜಿ ಸಚಿವ ಮಹೇಶ್ ಜೋಶಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಜಲ ಜೀವನ್ ಮಿಷನ್ ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ, ರಾಜ್ಯದ ಮಾಜಿ ಸಚಿವ ಮಹೇಶ್ ಜೋಶಿ ಅವರನ್ನು ಭ್ರಷ್ಟಾಚಾರ ನಿರೋಧಕ ದಳ ಇಂದು ಮುಂಜಾನೆ ಬಂಧಿಸಿದೆ. ಸುಮಾರು ₹900 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಎಸಿಬಿ ಡಿಐಜಿ ರಾಮೇಶ್ವರ್ ಸಿಂಗ್ ಅವರ ನೇತೃತ್ವದ ತಂಡವು ಇಂದು ಬೆಳಿಗ್ಗೆ ಮಹೇಶ್ ಜೋಶಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ. ಸಾರ್ವಜನಿಕ ಆರೋಗ್ಯ ಮತ್ತು ಎಂಜಿನಿಯರಿಂಗ್ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಈ ಹಗರಣದಲ್ಲಿ ಜೋಶಿ ಅವರ ನೇರ ಭಾಗಿಯಿರುವ ಬಗ್ಗೆ ತನಿಖಾ ಸಂಸ್ಥೆಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ಏಪ್ರಿಲ್ 25, 2025 ರಂದು ಮಹೇಶ್ ಜೋಶಿಯವರನ್ನು ಬಂಧಿಸಿತ್ತು. ಸುಮಾರು ಏಳು ತಿಂಗಳ ಸೆರೆವಾಸದ ನಂತರ, ಡಿಸೆಂಬರ್ 3, 2025 ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಆದರೆ, ಈಗ ಎಸಿಬಿ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಅವರು ಮತ್ತೆ ಜೈಲು ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್, ಮುಖ್ಯ ಎಂಜಿನಿಯರ್ ದಿನೇಶ್ ಗೋಯಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಇಲಾಖಾ ಅಧಿಕಾರಿಗಳು ಜೈಲಿನಲ್ಲಿದ್ದಾರೆ. ಸರ್ಕಾರಿ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಈ ಪ್ರಕರಣದ ತನಿಖೆಯನ್ನು ಎಸಿಬಿ ಈಗ ಚುರುಕುಗೊಳಿಸಿದ್ದು, ಮಹೇಶ್ ಜೋಶಿಯವರನ್ನು ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

Must Read