ಹೊಸದಿಗಂತ ಡಿಜಿಟಲ್ ಡೆಸ್ಕ್;
ಜಮ್ಮು ಮತ್ತು ಕಾಶ್ಮೀರ ಕೂಡ ದೆಹಲಿಯಂತೆ ‘ಅರ್ಧ-ರಾಜ್ಯ’ ಆಗಿದ್ದು, ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಏನೇ ಸಮಸ್ಯೆ ಬಂದರೂ ಅನುಭವ ಹಂಚಿಕೊಳ್ಳಲು ಸಿದ್ಧವಾಗಿದ್ದೇನೆ’ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅಧಿಕಾರ ವಹಿಸಲಿದ್ದಾರೆ. ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿಯಾಗಿರುವುದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಶಸ್ವಿ ಸರ್ಕಾರ ನಡೆಸಲು ಅವರಿಗೆ ಬೇಕಾದ ಎಲ್ಲ ಬೆಂಬಲವನ್ನು ನೀಡುತ್ತೇವೆ. ಒಮರ್ ಅಬ್ದುಲ್ಲಾ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗೆ ಸೀಮಿತ ಅಧಿಕಾರ ಇರುವುದರಿಂದ ದೆಹಲಿಯನ್ನು ‘ಅರ್ಧ-ರಾಜ್ಯ’ ಎಂದು ಕರೆಯಲಾಗುತ್ತದೆ. ಈಗ ಜಮ್ಮು-ಕಾಶ್ಮೀರವನ್ನು ಬಿಜೆಪಿ ಅರ್ಧ-ರಾಜ್ಯವನ್ನಾಗಿ ಮಾಡಿದೆ. ಏನೆಂದರೆ ಚುನಾಯಿತ ಸರ್ಕಾರಕ್ಕೆ ಸೀಮಿತ ಅಧಿಕಾರವಿದ್ದು, ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವಿದೆ. ತಮ್ಮ ಕೆಲಸದಲ್ಲಿ ಏನೇ ತೊಂದರೆಗಳು ಎದುರಾದರೂ ನನ್ನನ್ನು ಸಂಪರ್ಕಿಸಿ ಎಂದು ನಾನು ಒಮರ್‌ಗೆ ಹೇಳಲು ಬಯಸುತ್ತೇನೆ. ಏಕೆಂದರೆ ಕಳೆದ 10 ವರ್ಷಗಳಿಂದ ನಾನು ದೆಹಲಿ ಸರ್ಕಾರವನ್ನು ಮುನ್ನಡೆಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.