ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯಾ ಒಡೆಯ ರಾಮಲಲ್ಲಾನ ಪ್ರತಿಷ್ಠಾಪನೆ ದಿನವು ಆಸ್ತಿಕರ ಪಾಲಿಗೆ ಅಗಸ್ಟ್ 15ರ ದಿನದಷ್ಟೇ ಪವಿತ್ರ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರ ಇಂದು ಭಾರತವನ್ನು ಒಗ್ಗೂಡಿಸುವ ಸಾಧನವಾಗಿ ಮಾರ್ಪಟ್ಟಿದೆ. ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಅಯೋಧ್ಯೆಯ ಜನರಲ್ಲಿ ಸಂತೃಪ್ತಿ ಮೂಡಿಸಿದೆ. ಅಯೋಧ್ಯೆಗೆ ಮಾತ್ರ ಸೀಮಿತವಾಗಿದ್ದ ಈ ವಿಚಾರ ಈಗ ಇಡೀ ದೇಶದ ಗೌರವದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜ.22ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ಈಗಾಗಲೇ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ದೇಶದ ಗಣ್ಯರು, ವಿವಿಧ ಕ್ಷೇತ್ರದ ಸಾಧಕರು, ಸಿನಿಮಾ ತಾರೆಯರನ್ನು ಕೂಡಾ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಹ್ವಾನಿಸಲಾಗುತ್ತಿದೆ.