ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ: ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕೆಲಸ ಭರದಿಂದ ಸಾಗುತ್ತಿದ್ದು, ಜನವರಿ 22 ಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ.

ಇದರ ಭಾಗವಾಗಿ ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಆಹ್ವಾನವನ್ನು ನೀಡಿದ್ದಾರೆ.

2024ರ ಜನವರಿ 22 ರಂದು ಮಂದಿರದ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ನಿಯೋಗದಲ್ಲಿ ಕರ್ನಾಟಕದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸ್ವಾಮಿ ಗೋವಿಂದದೇವ ಗಿರಿ ಮತ್ತು ನೃಪೇಂದ್ರ ಮಿಶ್ರಾ ಇದ್ದರು. ನಿಯೋಗ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಅಯೋಧ್ಯೆಗೆ ಆಹ್ವಾನಿಸಿದ್ದು, ಅದನ್ನು ಪ್ರಧಾನಿ ಮೋದಿ ಸಂತೋಷದಿಂದ ಸ್ವೀಕರಿಸಿದ್ದಾರೆ.

ಈ ಕುರಿತು ಖುದ್ದು ಪ್ರಧಾನಿ ಮೋದಿ ಮಾಹಿತಿ ಹಂಚಿಕೊಂಡಿದ್ದು, ಇಂದು ಭಾವನೆಗಳಿಂದ ತುಂಬಿರುವ ದಿನ. ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನ ನಿವಾಸಕ್ಕೆ ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

ಜನವರಿಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಟ್ರಸ್ಟ್‌ನ ಚಂಪಕ್ ರೈ ಹೇಳಿದ್ದಾರೆ. ಇವರಲ್ಲದೆ ನಾಡಿನ ಪ್ರಮುಖ ಋಷಿಮುನಿಗಳು, ಸಂತರು ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗುವುದು. ಮುಖ್ಯ ಕಾರ್ಯಕ್ರಮವನ್ನು ರಾಜಕೀಯ ರಹಿತವಾಗಿಡಲು ಪ್ರಯತ್ನಿಸಲಾಗುವುದು ಎಂದು ಚಂಪಕ್ ರೈ ಹೇಳಿದರು. ವಿವಿಧ ರಾಜಕೀಯ ಪಕ್ಷಗಳ ಅತಿಥಿಗಳನ್ನೂ ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ವೇದಿಕೆ ಇರುವುದಿಲ್ಲ, ಸಾರ್ವಜನಿಕ ಸಭೆಯೂ ಇರುವುದಿಲ್ಲ. ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here